ವ್ಯಕ್ತಿಯೊರ್ವ ಮೂರು ಜನನಾಂಗಗಳನ್ನು ಹೊಂದಿದ್ದ ಅತಿ ವಿರಳ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಇಂಗ್ಲೆಂಡ್ನ 78 ವರ್ಷದ ವ್ಯಕ್ತಿಯೊಬ್ಬರು ಇತ್ತೀಚೆಗೆ ನಿಧನರಾಗಿದ್ದಾಗ ಅವರ ದೇಹವನ್ನು ‘ಯುನಿವರ್ಸಿಟಿ ಆಫ್ ಬರ್ಮಿಂಗ್ಹ್ಯಾಮ್’ನ ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಗಿತ್ತು.
ಮೃತ ವ್ಯಕ್ತಿಗೆ ಬಾಹ್ಯದಲ್ಲಿದ್ದ ಒಂದು ಶಿಶ್ನದ ಜೊತೆ ಆಂತರಿಕವಾಗಿ ಇನ್ನೆರಡು ಶಿಶ್ನ ಇರುವುದು ಕಂಡು ಬಂದಿದೆ ಎಂದು ಸಂಶೋಧಕರು ಹೇಳಿದ್ದಾರೆ. ಈ ಅಂಶವನ್ನು ಸಂಶೋಧಕರು ಕಾಲೇಜಿನ ‘ದಿ ಜರ್ನಲ್ ಆಫ್ ಮೆಡಿಕಲ್ ಕೇಸ್ ರಿಪೋರ್ಟ್ಸ್’ನಲ್ಲಿ ದಾಖಲಿಸಿದ್ದಾರೆ.
ವಿಚಿತ್ರವೆಂದರೆ ತಮ್ಮ ಜನನಾಂಗದ ಜೊತೆ ತಮ್ಮದೇ ದೇಹದಲ್ಲಿ ಇನ್ನೆರಡು ಜನನಾಂಗ ಇರುವುದು ಆ ವ್ಯಕ್ತಿಗೆ ಗೊತ್ತೆ ಇರಲಿಲ್ಲ. ಪುರುಷನ ದೇಹದ ಈ ಪರಿಸ್ಥಿತಿಗೆ ವೈದ್ಯಕೀಯ ಭಾಷೆಯಲ್ಲಿ ‘ಟ್ರಿಫಲಿಯಾ’ ಎನ್ನುತ್ತಾರೆ ಎಂದು ಸಂಶೋಧಕರು ಹೇಳಿದ್ದಾರೆ.
ಈ ಮೊದಲು ಟ್ರಿಫಲಿಯಾ ಪ್ರಕರಣ 2020 ರಲ್ಲಿ ಯುರೋಪ್ನಲ್ಲಿ ವರದಿಯಾಗಿತ್ತು. ಮಗುವೊಂದು ಮೂರು ಜನನಾಂಗಗಳೊಂದಿಗೆ ಜನಿಸಿತ್ತು. ಸುಧಾರಿತ ಶಸ್ತ್ರಚಿಕಿತ್ಸೆ ಮೂಲಕ ಅದನ್ನು ಸರಿಪಡಿಸಲಾಗಿತ್ತು. ಇದೀಗ ಮತ್ತೋರ್ವ ವ್ಯಕ್ತಿಗೆ ಮೂರು ಜನನಾಂಗ ಇರುವುದು ಆತ ಮೃತಪಟ್ಟ ಬಳಿಕ ಪತ್ತೆಯಾಗಿದೆ.
ಕೆಲವು ಪ್ರಕರಣಗಳಲ್ಲಿ ಮಗು ಹುಟ್ಟುವಾಗ ಬಾಹ್ಯ ಜನನಾಂಗ ಜೊತೆ ಆಂತರಿಕವಾಗಿ ಇನ್ನೊಂದು ಜನನಾಂಗ ಅಪರೂಪ ಎಂಬಂತೆ ಕಂಡು ಬರುತ್ತದೆ. ಆ ಸಮಸ್ಯೆಯನ್ನು ಚಿಕಿತ್ಸೆ ಮೂಲಕ ಸರಿ ಮಾಡಬಹುದು. ಆದರೆ, ಟ್ರಿಫಲಿಯಾ ಪ್ರಕರಣಗಳು ಇದುವರೆಗೆ ಜಗತ್ತಿನಲ್ಲಿ ಕಂಡು ಬಂದಿರುವುದು ಎರಡೇ ಎರಡು.
ಈ ರೀತಿಯ ಟ್ರಿಫಲಿಯಾ ಪ್ರಕರಣ ಯುನಿವರ್ಸಿಟಿ ಆಫ್ ಬರ್ಮಿಂಗ್ಹ್ಯಾಮ್ನ ಮೆಡಿಕಲ್ ಕಾಲೇಜಿನ ಸಂಶೋಧಕರಿಗೆ ತೀವ್ರ ಅಚ್ಚರಿ ತರಿಸಿದ್ದು, ಸದ್ಯ ಬದುಕಿರುವ ಕೆಲ ವ್ಯಕ್ತಿಗಳಲ್ಲಿಯೂ ಟ್ರಿಫಲಿಯಾ ಇರಬಹುದು. ಅದು ಅವರಿಗೆ ಗೊತ್ತಾಗದೇ ಇರಬಹುದು ಎಂದು ಸಂಶೋಧಕರು ಹೇಳಿದ್ದಾರೆ.