ಮುಂಬೈ: ಮಹಾರಾಷ್ಟ್ರದ ಪಾಲ್ಘರ್ನಲ್ಲಿ 28 ವಯಸ್ಸಿನ ಮಹಿಳೆಯನ್ನು ಆಕೆಯ ಲಿವ್-ಇನ್ ಪಾರ್ಟ್ನರ್ ಕೊಲೆ ಮಾಡಿರುವ ಘಟನೆ ನಡೆದಿದೆ. ಹತ್ಯೆಗೈದು ನಂತರ ಮೃತದೇಹವನ್ನು ತನ್ನ ಪತ್ನಿಯ ನೆರವಿನಿಂದ ಗುಜರಾತ್ನ ವಲ್ಸಾದ್ ತೊರೆಗೆ ಎಸೆದಿದ್ದಾನೆ. ಕೊಲೆಯಾದ ಮಹಿಳೆ ನೈನಾ ಮಹತ್ ಎಂದು ಪೊಲೀಸರು ಗುರುತಿಸಿದ್ದಾರೆ. ಈಕೆ ಮೇಕಪ್ ಆರ್ಟಿಸ್ಟ್ ಆಗಿ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದರು. ಆಕೆ ಆರೋಪಿ ಮನೋಹರ್ ಶುಕ್ಲಾ ಜೊತೆ ಐದು ವರ್ಷಗಳಿಂದ ಸಂಬಂಧ ಹೊಂದಿದ್ದಳು. ಶುಕ್ಲಾ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದ.
ನೈನಾ ಮತ್ತು ಶುಕ್ಲಾ 5 ವರ್ಷಗಳಿಂದ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದರು. ನೈನಾ ತನ್ನನ್ನು ಮದುವೆಯಾಗುವಂತೆ ಶುಕ್ಲಾಗೆ ಒತ್ತಾಯಿಸುತ್ತಿದ್ದಳು. ಅದಕ್ಕೆ ಶುಕ್ಲಾ ನಿರಾಕರಿಸಿದ್ದ. ಇದರಿಂದ ಬೇಸತ್ತು ನೈನಾ ತನ್ನ ಮೇಲೆ ಶುಕ್ಲಾ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಪ್ರಕರಣವನ್ನು ಹಿಂಪಡೆಯುವಂತೆ ಶುಕ್ಲಾ ಕೇಳಿಕೊಂಡಿದ್ದ. ಆದಕ್ಕೆ ನಿರಾಕರಿಸಿದಾಗ ಆಕೆಯನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನೈನಾಳನ್ನ ಕೊಲೆ ಮಾಡಿದ ನಂತರ ಶುಕ್ಲಾ ಶವವನ್ನು ವಲ್ಸಾದ್ ತೊರೆಯಲ್ಲಿ ಎಸೆಯುವ ಮೊದಲು ಸೂಟ್ಕೇಸ್ನಲ್ಲಿ ತುಂಬಲು ತನ್ನ ಹೆಂಡತಿಯ ಸಹಾಯ ಪಡೆದಿದ್ದಾನೆ. ಈ ಘಟನೆ ಆಗಸ್ಟ್ 9 ರಲ್ಲಿ ನಡೆದಿತ್ತು. ನೈನಾ ಕುಟುಂಬಸ್ಥರು ಆಗಸ್ಟ್ 12 ರಂದು ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ನೈಗಾಂವ್ ಪೊಲೀಸರಿಗೆ ದೂರು ನೀಡಿದ್ದರು. ಆಕೆಯ ಸಹೋದರಿ ಜಯಾ, ಆಗಸ್ಟ್ 12 ರಂದು ನೈನಾಳ ಫೋನ್ ಸ್ವಿಚ್ ಆಫ್ ಆಗಿದೆ. ಸಂಪರ್ಕ ಸಾಧ್ಯವಾಗಿಲ್ಲ ಎಂದು ಪೊಲೀಸರಿಗೆ ನಾಪತ್ತೆ ದೂರು ದಾಖಲಿಸಿದ್ದಳು. ಆರೋಪಿ ಶುಕ್ಲಾ ಮತ್ತು ಆತನ ಪತ್ನಿಯನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.