ಬೆಂಗಳೂರು: ವಿಧಾನಸಭಾ ಚುನಾವಣೆ ಹತ್ತಿರಾಗುತ್ತಲೇ ರಾಜ್ಯ ರಾಜಕೀಯದಲ್ಲಿ ಕುತೂಹಲಕರ ಬದಲಾವಣೆಗಳು ಆಗುತ್ತಲೇ ಇವೆ. ಪಕ್ಷದ ನಾಯಕರುಗಳ ಪ್ರತಿಯೊಂದು ಹೆಜ್ಜೆಯೂ ಮಹತ್ವದ್ದೆನಿಸುತ್ತಿದೆ.
ಮಂಗಳವಾರ ಬಿಜೆಪಿ (BJP) ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ (BL Santosh), ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಅವರನ್ನು ಭೇಟಿಯಾಗಿದ್ದಾರೆ. ಯಡಿಯೂರಪ್ಪ ಅವರ ಕಾವೇರಿ ನಿವಾಸಕ್ಕೆ ತೆರಳಿ ಸಂತೋಷ್ ಮಾತುಕತೆ ನಡೆಸಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಸಂತೋಷ್ ಹಾಗೂ ಯಡಿಯೂರಪ್ಪ ಮಹತ್ವದ ಚರ್ಚೆ ನಡೆಸಿದ್ದಾರೆ. ಈಗಾಗಲೇ ಪಕ್ಷ ತೊರೆದಿರುವ ಲಿಂಗಾಯತ ನಾಯಕರ ಕ್ಷೇತ್ರದಲ್ಲಿ ತಂತ್ರಗಾರಿಕೆ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.
ಮಾಜಿ ಸಿಎಂ ಜಗದಿಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಲೇ ತಮಗೆ ಟಿಕೆಟ್ ಕೈತಪ್ಪಲು ಬಿಎಲ್ ಸಂತೋಷ್ ಕಾರಣ ಎಂದು ಆರೋಪ ಹೊರಿಸಿದ್ದರು. ಇದಾದ ಬಳಿಕ ಕಾಂಗ್ರೆಸ್ ನಾಯಕರುಗಳು ಒಬ್ಬೊಬ್ಬರಂತೆ ಸಂತೋಷ್ ವಿರುದ್ಧ ಹೇಳಿಕೆಗಳನ್ನು ನೀಡಿದ್ದರು. ಲಿಂಗಾಯತ ನಾಯಕರುಗಳನ್ನು ಬಿಜೆಪಿ ಕಡೆಗಣಿಸಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಇದೀಗ ಬಿಎಲ್ ಸಂತೋಷ್, ಲಿಂಗಾಯತ ನಾಯಕ ಯಡಿಯೂರಪ್ಪರನ್ನು ಭೇಟಿ ಮಾಡಿರುವುದು ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.