ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಲಿಂಗಾಯತ ಮುಖಂಡರನ್ನು ಕರೆಸಿಕೊಂಡು ಚರ್ಚೆ ನಡೆಸಿದರು. ಶಿಕಾರಿಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಪುತ್ರ ಬಿ.ವೈ. ವಿಜಯೇಂದ್ರ ಅವರು ನಾಮಪತ್ರ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರು ಸಂಜೆಯೇ ಬೆಂಗಳೂರಿಗೆ ವಾಪಸ್ ಆಗಿ ತಮ್ಮ ಕಾವೇರಿ ನಿವಾಸದಲ್ಲಿ ಲಿಂಗಾಯತ ಮುಖಂಡರ ಸಭೆಯನ್ನು ನಡೆಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಸೋಮಣ್ಣ, ಸಿ.ಸಿ ಪಾಟೀಲ್, ಬಿ.ಸಿ. ಪಾಟೀಲ್, ಮುರುಗೇಶ್ ನಿರಾಣಿ, ಶಂಕರ್ ಪಾಟೀಲ್ ಮುನೇನಕೊಪ್ಪ, ಸಂಸದರಾದ ಜಿ.ಎಂ. ಸಿದ್ದೇಶ್ವರ್, ಪಿ.ಸಿ ಗದ್ದಿಗೌಡರ್, ಮಂಗಳಾ ಸುರೇಶ್ ಅಂಗಡಿ,
ಅಣ್ಣಾ ಸಾಹೇಬ್ ಜೊಲ್ಲೆ, ಶಿವಕುಮಾರ್ ಉದಾಸಿ, ಕರಡಿ ಸಂಗಣ್ಣ, ಬಿ.ವೈ ರಾಘವೇಂದ್ರ, ಜಿ.ಎಸ್ ಬಸವರಾಜ್, ಪ್ರಭಾಕರ್ ಕೋರೆ ಅವರು ಸಭೆಯಲ್ಲಿ ಭಾಗವಹಿಸಿದ್ದಾರೆ. ಜತೆಗೆ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಮಹಾಂತೇಶ್ ಕವಟಗಿಮಠ, ಅರವಿಂದ್ ಬೆಲ್ಲದ್, ಎಂ.ಪಿ. ರೇಣುಕಾಚಾರ್ಯ, ಎ.ಎಸ್ ಪಾಟೀಲ್ ನಡಹಳ್ಳಿ, ಪರಿಷತ್ ಸದಸ್ಯರಾದ ಬಿ.ಜಿ ಪಾಟೀಲ್, ನವೀನ್, ಸತೀಶ್, ಪಿ.ಹೆಚ್ ಪೂಜಾರು ಸೇರಿದಂತೆ ಒಟ್ಟು 41 ಜನರ ಲಿಂಗಾಯತ ಸಮುದಾಯ ನಾಯಕರ ನೇತೃತ್ವದಲ್ಲಿ ಸಭೆ ನಡೆದಿದೆ. ಲಿಂಗಾಯತ ಸಮುದಾಯದಲ್ಲಿ ಸಣ್ಣ ಮಟ್ಟಿನ ಅಪನಂಬಿಕೆ ಮುಂದುವರಿದಿರುವುದನ್ನು ಹೈಕಮಾಂಡ್ ಮನಗಂಡಿದ್ದು, ಇದೇ ಕಾರಣಕ್ಕಾಗಿ ಬಿ.ಎಸ್. ಯಡಿಯೂರಪ್ಪ ಅವರದೇ ನೇತೃತ್ವದಲ್ಲಿ ನಾಯಕರ ಸಭೆ ನಡೆಸಿ ಲಿಂಗಾಯತ ಸಮುದಾಯದ ವಿಶ್ವಾಸ ಗಳಿಸಲು ಏನು ಮಾಡಬಹುದು ಎಂಬ ಬಗ್ಗೆ ಚರ್ಚಿಸಲಾಗುತ್ತಿದೆ.