ಬೆಂಗಳೂರು:ಅರಸೀಕೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಸಂಬಂಧಿ ಎನ್ಆರ್ ಸಂತೋಷ್ ಅಧಿಕೃತವಾಗಿ ಜೆಡಿಎಸ್ ಸೇರಿದ್ದಾರೆ. ಶನಿವಾರ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ನೇತೃತ್ವದಲ್ಲಿ ತೆನೆ ಹೊತ್ತ ಸಂತೋಷ್ಗೆ ಅರಸೀಕೆರೆ ಟಿಕೆಟ್ ಖಚಿತವಾಗಿದೆ ಎಂದು ತಿಳಿದುಬಂದಿದೆ.
ಈ ಮೊದಲು ಅರಸೀಕೆರೆಯಲ್ಲಿ ಕೆಎನ್ ಶಿವಲಿಂಗೇಗೌಡರು ಜೆಡಿಎಸ್ನಿಂದಲೇ ಶಾಸಕರಾಗಿದ್ದರು. ಅವರು ಕಾಂಗ್ರೆಸ್ ಸೇರಿದ ಬಳಿಕ ಅಶೋಕ್ ಬಾಣಾವರ್ ಎಂಬುವವರನ್ನು ಜೆಡಿಎಸ್ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿತ್ತು. ಆದರೆ, ಈಗ ಎನ್ಆರ್ ಸಂತೋಷ್ ಅವರಿಗೆ ಟಿಕೆಟ್ ಫೈನಲ್ ಆಗಿದೆ ಎಂದು ಹೇಳಲಾಗುತ್ತಿದ್ದು, ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರ ಸಮ್ಮುಖದಲ್ಲಿ ಅಶೋಕ್ ಅವರನ್ನು ಮನವೊಲಿಸಿ ಸಂತೋಷ್ಗೆ ಟಿಕೆಟ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಮೂರು ವರ್ಷದಿಂದ ಅರಸೀಕೆರೆ ಕ್ಷೇತ್ರದಲ್ಲಿ ಸಂತೋಷ್ ಸಕ್ರಿಯರಾಗಿದ್ದರು. ಈ ಬಾರಿ ಬಿಜೆಪಿ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ, ಸಂತೋಷ್ ಬದಲಿಗೆ ಜಿವಿ ಬಸವರಾಜು ಅವರಿಗೆ ಟಿಕೆಟ್ ನೀಡಲಾಗಿತ್ತು. ಇದರಿಂದ ಬೇಸತ್ತ ಎನ್ಆರ್ ಸಂತೋಷ್, ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದು, ಟಿಕೆಟ್ ಕೂಡ ಗಿಟ್ಟಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಎನ್ಆರ್ ಸಂತೋಷ್ ಜೊತೆ ಬಾಗಲಕೋಟೆಯ ದೇವರಾಜ್ ಪಾಟೀಲ್ ಕೂಡ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದಾರೆ. ಇಬ್ಬರು ಮುಖಂಡರನ್ನು ಎಚ್ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಪಕ್ಷದ ಶಾಲು ಹೊದಿಸಿ ಬರಮಾಡಿಕೊಂಡರು. ಎನ್ಆರ್ ಸಂತೋಷ್ ಹಾಗೂ ದೇವರಾಜ್ ಪಾಟೀಲ್ ಎಚ್ಡಿ ದೇವೇಗೌಡರಿಂದ ಆಶೀರ್ವಾದ ಕೂಡ ಪಡೆದರು.
ಈಗಾಗಲೇ ಪ್ರಸಕ್ತ ವಿಧಾನಸಭೆ ಚುನಾವಣೆಯ ಜೆಡಿಎಸ್ ಅಭ್ಯರ್ಥಿಗಳ ಎರಡು ಪಟ್ಟಿಗಳನ್ನು ಬಿಡುಗಡೆ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರು, ಶನಿವಾರ ಮತ್ತೆ ಐವರು ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಿದರು.
ಚಿತ್ರದುರ್ಗಕ್ಕೆ ವಿಧಾನ ಪರಿಷತ್ನ ಮಾಜಿ ಸದಸ್ಯ ರಘು ಅಚಾರ್, ಮಡಿಕೇರಿಗೆ ಎನ್ಎಂ ಮುತ್ತಪ್ಪ, ಮೂಡಬಿದಿರೆಗೆ ಅಮರಶ್ರೀ, ವರುಣಾ ಕ್ಷೇತ್ರಕ್ಕೆ ಮಾಜಿ ಶಾಸಕ ಡಾ.ಭಾರತಿ ಶಂಕರ್, ಬಾಗಲಕೋಟೆ ಕ್ಷೇತ್ರಕ್ಕೆ ದೇವರಾಜ್ ಪಾಟೀಲ್ ಹಾಗೂ ಯಾದಗಿರಿ ಕ್ಷೇತ್ರಕ್ಕೆ ಮಾಜಿ ಸಚಿವ ಎಬಿ ಮಾಲಕರೆಡ್ಡಿ ಅವರನ್ನು ಜೆಡಿಎಸ್ ಅಭ್ಯರ್ಥಿಗಳನ್ನಾಗಿ ಘೋಷಿಸಿದ್ದಾರೆ.