ಬೆಂಗಳೂರು: ಬಜೆಟ್ಗೂ ಮುನ್ನ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶಾಸಕಾಂಗ ಪಕ್ಷದ ಸಭೆ ಮಾಡಲಾಗುತ್ತಿದೆ. ಸದನದಲ್ಲಿ ಒಗ್ಗಟ್ಟು ಪ್ರದರ್ಶಿಸುವಂತೆ ಶಾಸಕರಿಗೆ ಸಿಎಂ ಸೂಚನೆ ನೀಡಿದ್ದು, ಗ್ಯಾರಂಟಿಗಳು ಜನರಿಗೆ ತಲುಪುವಂತೆ ನೋಡಿಕೊಳ್ಳಲು ಕಿವಿಮಾತು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಇಂದು ಮಧ್ಯಾಹ್ನ 12 ಗಂಟೆಗೆ ತಮ್ಮ 14ನೇ ಬಜೆಟ್ ಮಂಡನೆ ಮಾಡಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೂತನ ಕಾಂಗ್ರೆಸ್ ಸರ್ಕಾರದ 2023-24 ಸಾಲಿನ ನೂತನ ಬಜೆಟ್ ಮಂಡನೆ ಮಾಡಲಿದ್ದಾರೆ. 9 ತಿಂಗಳ ಬಜೆಟ್ ಮಂಡನೆ ಮಾಡುವ ಮೂಲಕ ತಮ್ಮ 14ನೇ ಆಯವ್ಯಯ ಮಂಡಿಸಲಿದ್ದಾರೆ.
ಸುಮಾರು 3.30 ಲಕ್ಷ ಕೋಟಿ ಆಸುಪಾಸಿನ ಆಯವ್ಯಯ ಮಂಡನೆ ಮಾಡಲಿದ್ದಾರೆ. ಕಳೆದ 25 ದಿನಗಳಿಂದ ಸಿಎಂ ಸಿದ್ದರಾಮಯ್ಯ ಇಲಾಖಾವಾರು ಬಜೆಟ್ ಪೂರ್ವಬಾವಿ ಸರಣಿ ಸಭೆಗಳನ್ನು ನಡೆಸಿದ್ದಾರೆ. ಸುಮಾರು 3.30 ಲಕ್ಷ ಕೋಟಿ ಆಸುಪಾಸಿನ ಬಜೆಟ್ ಮಂಡನೆ ಮಾಡಲಿದ್ದು, ಬಹುತೇಕ ಗ್ಯಾರಂಟಿ ಕೇಂದ್ರೀಕೃತ ಬಜೆಟ್ ಆಗಿರಲಿದೆ.
ಸಿದ್ದರಾಮಯ್ಯ ಅವರ ಬಜೆಟ್ ಹೆಚ್ಚಿನ ತೆರಿಗೆ ಹೊರೆ ಇಲ್ಲದೆ, ಬೊಮ್ಮಾಯಿ ಸರ್ಕಾರ ಮಂಡಿಸಿದ ಬಜೆಟ್ನ ಮರು ಹಂಚಿಕೆಗೆ ಬಹುತೇಕ ಸೀಮಿತವಾಗಿರಲಿದೆ. ಗ್ಯಾರಂಟಿಗಳಿಗೆ ಹಣ ಹೊಂದಿಸುವ ಹೊಣೆಗಾರಿಕೆಯೊಂದಿಗೆ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಲಿದ್ದಾರೆ.
ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್ನಲ್ಲಿ ಹೆಚ್ಚಿನ ಸಾಲದ ಮೊರೆ ಹೋಗುವುದು ಅನುಮಾನವಾಗಿದೆ. ಹಿಂದಿನ ಸರ್ಕಾರ ಮಂಡಿಸಿದ್ದ 2023-24ರ ಬಜೆಟ್ನಲ್ಲಿ ಅಂದಾಜು 77,750 ಕೋಟಿ ಸಾಲ ಮಾಡುವುದಾಗಿ ತಿಳಿಸಿತ್ತು. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಪಂಚ ಗ್ಯಾರಂಟಿಯೇ ದೊಡ್ಡ ಹೊರೆಯಾಗಿದೆ. ಆದರೂ ಈ ಬಾರಿಯ ಬಜೆಟ್ನಲ್ಲಿ ಸಿದ್ದರಾಮಯ್ಯ ಸರ್ಕಾರ ಬೊಮ್ಮಾಯಿ ಸರ್ಕಾರ ಅಂದಾಜಿಸಿದ ಸಾಲದ ಮಿತಿಯಲ್ಲೇ ಇರಲಿದ್ದಾರೆ ಎನ್ನಲಾಗಿದೆ.