ಬೆಂಗಳೂರು: ನಾಳೆಯಿಂದ ರಾಜ್ಯದ ಬಜೆಟ್ ಅಧಿವೇಶನ ಪ್ರಾರಂಭವಾಗುತ್ತಿದೆ. ನಾಳೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ವಿಧಾನ ಮಂಡಲದ ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ಭಾಷಣ ಮಾಡಲಿದ್ದು, ಫೆ.16ರಂದು ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. ಹಲವು ವಿಧೇಯಕಗಳು ಮಂಡನೆಯಾಗಲಿದ್ದು ಇದರ ಜೊತೆಗೆ ಈ ಬಾರಿಯ ಅಧಿವೇಶನದಲ್ಲಿ ಕಾಂಗ್ರೆಸ್- ಮೈತ್ರಿ ನಾಯಕರ ಹೋರಾಟಗಳು ಕೂಡ ನಡೆಯಲಿವೆ..
ರಾಜ್ಯದಲ್ಲಿ ನಾಳೆಯಿಂದ ಬಜೆಟ್ ಅಧಿವೇಶನ ಪ್ರಾರಂಭವಾಗ್ತಾ ಇದೆ. ಲೋಕಸಭೆ ಚುನಾವಣೆಗೆ ಹೊತ್ತಲ್ಲೇ ಬಜೆಟ್ ಅಧಿವೇಶ ಇರೋದ್ರಿಂದ ಈ ಬಾರಿಯ ಬಜೆಡ್ ಮಹತ್ವ ಪಡೆದುಕೊಂಡಿದೆ. ಫೆಬ್ರವರಿ 16 ರಂದು ರಾಜ್ಯದ ಬಜೆಟ್ ಅನ್ನ ಸಿಎಂ ಸಿದ್ದರಾಮಯ್ಯ ಮಂಡಣೆ ಮಾಡಲಿದ್ದಾರೆ. ಇನ್ನು ಸಿದ್ದರಾಮಯ್ಯ ಅವರ 15 ನೇ ಬಾರಿಯ ಬಜೆಟ್ ಮಂಡಣೆ ಇದಾಗಿರಲಿದ್ದು ಕರ್ನಾಟಕದ ಮಟ್ಟಿಗೆ ಇದೊಂದು ಹೊಸ ದಾಖಲೆ ಸಿದ್ದರಾಮಯ್ಯ ಅವರ ಪಾಲಿಗೆ ಬರಲಿದೆ.
ಈ ಬಾರಿಯ ಬಜೆಟ್ ಅಧಿವೇಶನ ಚುನಾವಣೆ ಜೊತೆಗೆ ಪ್ರತಿಭಟನೆಗಳಿಂದಲೂ ಹೆಚ್ಚು ಮಹತ್ವ ಪಡೆಯುತ್ತಿದೆ. ಅತ್ತ ಅನುದಾನ ವಿಚಾರವಾಗಿ ಕಾಂಗ್ರೆಸ್ ಸರ್ಕಾರ ಕೇಂದ್ರದ ವಿರುದ್ಧ ಶ್ವೇತ ಪತ್ರ ಹೊರಡಿಸಲು ತಯಾರಿ ನಡೆಸಿದ್ದರೆ, ಇತ್ತ ಬಿಜೆಪಿ ಕೂಡ 40 ಪರ್ಸೆಂಟ್ ಕಮಿಷನ್ ಸೇರಿದಂತೆ ಇನ್ನಿತರ ವಿಚಾರಗಳನ್ನ ಇಟ್ಟುಕೊಂಡು ಪ್ರತಿಭಟನೆ ಮಾಡಲು ತಯಾರಿ ನಡೆಸಿವೆ. ಇನ್ನು ಪ್ರತ್ಯೇಕ ರಾಷ್ಟ್ರದ ಧ್ವನಿ ವಿಚಾರವಾಗಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ನೀಡಿದ್ದ ಹೇಳಿಕೆಯು ಸದನದಲ್ಲಿ ಪ್ರತಿಧ್ವನಿಸುವ ಸಾಧ್ಯತೆಯಿದೆ.
ಇನ್ನು ಡಿ.ಕೆ.ಸುರೇಶ್ ಹಾಗೂ ಶಾಸಕ ವಿನಯ್ ಕುಲಕರ್ಣಿಯನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ನೀಡಿರುವ ಪ್ರಚೋದನಾತ್ಮಕ ಹೇಳಿಕೆಯ ವಿರುದ್ಧ ಕಾಂಗ್ರೆಸ್ ಸದಸ್ಯರು ವಾಗ್ದಾಳಿ ನಡೆಸುವ ಸಾಧ್ಯತೆಯಿದೆ. ಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಮದಲ್ಲಿರುವ ಧ್ವಜಸ್ತಂಭದಲ್ಲಿ ಅನುಮತಿ ಪಡೆಯದೆ ಹಾರಿಸಲಾಗಿದ್ದ ಹನುಮ ಧ್ವಜವನ್ನು ಜಿಲ್ಲಾಡಳಿತ ತೆರವು ಗೊಳಿಸಿದ ಘಟನೆಯನ್ನು ಮುಂದಿಟ್ಟುಕೊಂಡು ರಾಜ್ಯ ಸರಕಾರದ ವಿರುದ್ಧ ಸದನದಲ್ಲಿ ಹೋರಾಡಲು ವಿಪಕ್ಷಗಳು ಸಜ್ಜಾಗಿವೆ.
ಇನ್ನು ಈ ಬಾರಿ ಪ್ರಮುಖ ವಿಧೇಯಕಗಳ ಮಂಡನೆಯಾಗುವ ಸಾಧ್ಯತೆ ಇದೆ. ವಾಣಿಜ್ಯ ಮಳಿಗೆ ನಾಮಫಲಕದಲ್ಲಿ ಕನ್ನಡ ಭಾಷೆಗೆ ಪ್ರಾಧಾನ್ಯತೆ ನೀಡುವುದು, ಸಹಕಾರ ಸಂಘಗಳ ಆಡಳಿತ ಮಂಡಳಿಯಲ್ಲಿ ಮೀಸಲಾತಿ ಕಲ್ಪಿಸುವುದು, ಮುಖ್ಯಮಂತ್ರಿ ರಾಜಕೀಯ ಸಲಹೆಗಾರರ ರಕ್ಷಣೆಗೆ ಕಾನೂನು ಬಲ ಕಲ್ಪಿಸುವುದು, ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ಪ್ರತ್ಯೇಕ ವ್ಯವಸ್ಥೆ, ಕೈಗಾರಿಕೆ ಹಾಗೂ ವಾಣಿಜ್ಯ ಬಳಕೆ ನೀರಿನ ಕರ ಹೆಚ್ಚಿಸುವುದು ಸೇರಿ ಮಹತ್ವದ ವಿಧೇಯಕಗಳು ಈ ಅಧಿವೇಶನದಲ್ಲಿ ಮಂಡನೆಯಾಗು ಸಾಧ್ಯತೆ ಇದೆ.
ನಾಳೆಯಿಂದ 23ರ ವರೆಗೆ ಒಟ್ಟು 10 ದಿನಗಳ ಕಾಲ ವಿಧಾನಮಂಡಲದ ಜಂಟಿ ಅಧಿವೇಶನ ಇರಲಿದ್ದು. ನಾಳೆಯಿಂದ 23ರ ವರೆಗೆ ಬೆಳಗ್ಗೆ 6ಗಂಟೆಯಿಂದ ಮಧ್ಯರಾತ್ರಿ 12ಗಂಟೆಯ ವರೆಗೆ ವಿಧಾನಸೌಧ ಕಟ್ಟಡದ 2 ಕಿ.ಮೀ. ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದ್ದು ರಾಜ್ಯದ ಆಯವ್ಯಯ ಮಂಡನೆ ಜೊತೆ ರಾಜಕೀಯ ಜಿದ್ದಾಜಿದ್ದಿನ ವಾಕ್ಸಮರಕ್ಕೆ ಶಕ್ತಿಸೌಧ ವೇದಿಕೆಯಾಗಿದೆ