ಲಖನೌ: ರಾಜ್ಯದಲ್ಲಿನ ಕ್ರಿಮಿನಲ್ಗಳು ಮತ್ತು ಮಾಫಿಯಾ ವಿರುದ್ಧ ತಮ್ಮ ಸರ್ಕಾರದ ಬುಲ್ಡೋಜರ್ ಕ್ರಮವನ್ನು ಸಮರ್ಥಿಸಿಕೊಂಡಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಅಭಿವೃದ್ಧಿಯ ಹಾದಿಯಲ್ಲಿ ಯಾರೇ, ಯಾವುದೇ ರೀತಿಯ ಅಡ್ಡಿ ಉಂಟುಮಾಡಿದರೂ ಅವರ ವಿರುದ್ಧ ತಕ್ಷಣವೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಎಎನ್ಐ ಸುದ್ದಿಸಂಸ್ಥೆಗೆ ನೀಡಿದ ಪಾಡ್ಕಾಸ್ಟ್ ಸಂದರ್ಶನದಲ್ಲಿ ಮಾತನಾಡಿದ ಯೋಗಿ, ರಾಜ್ಯದ ಅಭಿವೃದ್ಧಿಗೆ ಬುಲ್ಡೋಜರ್ ಮತ್ತು ಆಧುನಿಕ ಯಂತ್ರಗಳು ಅಗತ್ಯವಾಗಿವೆ ಎಂದು ಪ್ರತಿಪಾದಿಸಿದ್ದಾರೆ.
“ಉತ್ತರ ಪ್ರದೇಶದಂತಹ ಬೃಹತ್ ರಾಜ್ಯವು ತ್ವರಿತವಾಗಿ ಅಭಿವೃದ್ಧಿಯಾಗಬೇಕು ಎಂದರೆ, ಈ ಕಾಲಘಟ್ಟದಲ್ಲಿ ನಮಗೆ ಸಲಿಕೆ ಮತ್ತು ಗುದ್ದಲಿಗಳು ಬೇಕಿವೆಯೇ? ಈ ಮುಂಚೆ ಯಾವುದೇ ಕಾಮಗಾರಿಗೆ ಅನುಮೋದನೆ ದೊರೆತರೂ ಮಾಫಿಯಾ ಬಂದು ಅಕ್ರಮ ಆಸ್ತಿಯನ್ನು ಕಬಳಿಸುತ್ತಿತ್ತು. ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳಲು ಹಿಂದಿನ ಸರ್ಕಾರಕ್ಕೆ ಧೈರ್ಯವೇ ಇರಲಿಲ್ಲ” ಎಂದು ಯೋಗಿ ಟೀಕಿಸಿದ್ದಾರೆ.
ತಮ್ಮ ಸರ್ಕಾರವು ಕ್ರಿಮಿನಲ್ಗಳಿಗೆ ಸೇರಿದ ಮನೆಗಳನ್ನು ಬುಲ್ಡೋಜರ್ ನುಗ್ಗಿಸಿ ಉರುಳಿಸುತ್ತಿರುವುದು ಏಕೆ ಎಂಬ ಪ್ರಶ್ನೆಗೆ, “ಸರ್ಕಾರದ ಆಸ್ತಿಯನ್ನು ಅಕ್ರಮವಾಗಿ ವಶಪಡಿಸಿಕೊಂಡವರಿಗೆ ನಾನು ಆರತಿ ಎತ್ತಬೇಕೇ? ಕ್ರಿಮಿನಲ್ಗಳು ಹಾಗೂ ಮಾಫಿಯಾ ವಿರುದ್ಧ ಉತ್ತರ ಪ್ರದೇಶದ ಜನರು ಕ್ರಮ ಜರುಗಿಸುವುದನ್ನು ಬಯಸಿದ್ದಾರೆ” ಎಂದು ಹೇಳಿದ್ದಾರೆ.
ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಕ್ರಿಮಿನಲ್ಗಳ ಮೇಲೆ ಮಾತ್ರವೇ ತಮ್ಮ ಸರ್ಕಾರ ಟಾರ್ಗೆಟ್ ಮಾಡುತ್ತಿದೆ ಎಂಬ ಆರೋಪಗಳನ್ನು ಯೋಗಿ ನಿರಾಕರಿಸಿದ್ದಾರೆ. “ಒಬ್ಬನೇ ಒಬ್ಬ ಅಮಾಯಕ ಮುಸ್ಲಿಂ ವ್ಯಕ್ತಿ ಬಂದು ನನಗೆ ಅನ್ಯಾಯವಾಗುತ್ತಿದೆ ಎಂದು ನನ್ನ ಬಳಿ ಹೇಳಲಿ ನೋಡೋಣ. ಅಷ್ಟಕ್ಕೂ ಅವರೆಲ್ಲರಿಗೂ ನ್ಯಾಯಾಲಯ ಇದ್ದೇ ಇದೆ” ಎಂದಿದ್ದಾರೆ.