ಮುಂಬೈ: ಐಸಿಸಿ ಪುರುಷರ ಟಿ20 ವಿಶ್ವಕಪ್ (T20 World Cup 2024) ಟೂರ್ನಿ ಬಳಿಕ 2024ರ ಚಾಂಪಿಯನ್ ಪಟ್ಟ ಅಲಂಕರಿಸಿದ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಬಳಗಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಬರೋಬ್ಬರಿ 125 ಕೋಟಿ ರೂ. ನಗದು ಬಹುಮಾನ (prize money) ಘೋಷಿಸಿದೆ.
ಬಾರ್ಬಡೋಸ್ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್ಗಳ ರೋಚಕ ಗೆಲುವು ಸಾಧಿಸುವ ಮೂಲಕ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಕಿರೀಟಕ್ಕೆ ಭಾರತ ತಂಡ ಮುತ್ತಿಟ್ಟಿದೆ. ಅಲ್ಲದೇ 11 ವರ್ಷಗಳ ಐಸಿಸಿ ಟ್ರೋಫಿ ಬರವನ್ನೂ ನೀಗಿಸಿಕೊಂಡಿದೆ.
ಟಿ20 ವಿಶ್ವಕಪ್ ಗೆದ್ದ ಮರುದಿನವೇ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (Jay Shah) ಅವರು ವಿಜೇತ ತಂಡಕ್ಕೆ ಬರೋಬ್ಬರಿ 125 ಕೋಟಿ ರೂ.ಗಳ ಬಹುಮಾನ ಘೋಷಣೆ ಮಾಡಿದ್ದಾರೆ
ಈ ಕುರಿತು X ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಜಯ್ ಶಾ, ಐಸಿಸಿ ಪುರುಷರ ಟಿ20 ವಿಶ್ವಕಪ್ 2024 ಅನ್ನು ಗೆದ್ದ ಟೀಂ ಇಂಡಿಯಾಕ್ಕೆ 125 ಕೋಟಿ ರೂ. ಬಹುಮಾನ ಘೋಷಿಸಲು ನನಗೆ ಸಂತೋಷವಾಗಿದೆ. ತಂಡವು ಟೂರ್ನಿಯುದ್ಧಕ್ಕೂ ಅಸಾಧಾರಣ ಪ್ರತಿಭೆ, ದೃಢನಿಶ್ಚಯ ಮತ್ತು ಕ್ರೀಡಾ ಮನೋಭಾವ ಪ್ರದರ್ಶಿಸಿದೆ. ಈ ಅತ್ಯುತ್ತಮ ಸಾಧನೆಗಾಗಿ ಎಲ್ಲಾ ಆಟಗಾರರು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.