ಬೇಸಿಗೆಯಲ್ಲಿ ಹೊರಗಡೆ ಹೋಗುತ್ತಲಿದ್ದರೆ, ಹೆಚ್ಚಾಗಿ ನೀರಿನ ಬಾಟಲಿ ಹಿಡಿದುಕೊಳ್ಳುವುದು ಸಹಜ. ಬಿಸಿಲಿನ ಧಗೆಗೆ ನೀರು ದೇಹಕ್ಕೆ ಬೇಕಾಗಿರುವಂತಹ ಅತೀ ಅವಶ್ಯಕ ದ್ರವ. ಆದರೆ ಬೇಸಿಗೆಯಲ್ಲಿ ಹೆಚ್ಚಾಗಿ ನೀರಿನೊಂದಿಗೆ ಮಜ್ಜಿಗೆ ಬಾಟಲಿಯನ್ನು ಕೂಡ ಹಿಡಿದುಕೊಂಡು ಸುತ್ತಾಡಲು ಹೋದರೆ ಆಗ ಹಲವಾರು ರೀತಿಯ ಆರೋಗ್ಯ ಲಾಭಗಳು ಸಿಗುವುದು.
ಮಜ್ಜಿಗೆಯನ್ನು ಹಿಂದಿನಿಂದಲೂ ನಮ್ಮ ಹಿರಿಯರು ಆಹಾರ ಕ್ರಮದಲ್ಲಿ ಬಳಕೆ ಮಾಡಿಕೊಂಡು ಬಂದಿರುವರು. ಇದು ಜೀರ್ಣಕ್ರಿಯೆಗೆ ಸಹಕಾರಿ ಮಾತ್ರವಲ್ಲದೆ, ದೇಹವನ್ನು ನಿರ್ಜಲೀಕರಣದಿಂದ ತಪ್ಪಿಸುವುದು. ಅದರಲ್ಲೂ ಮಸಾಲ ಮಜ್ಜಿಗೆ ಕುಡಿದರೆ ಅದು ದೇಹಕ್ಕೆ ತಂಪು ನೀಡುವ ಜತೆಗೆ ಇನ್ನಿತರ ಕೆಲವೊಂದು ಆರೋಗ್ಯ ಲಾಭಗಳನ್ನು ನೀಡುವುದು.
ಮಸಾಲ ಮಜ್ಜಿಗೆಗೆ ಸಾಮಾನ್ಯವಾಗಿ ಕೆಲವೊಂದು ಸಾಂಬಾರ ಪದಾರ್ಥಗಳಾಗಿರುವಂತಹ ಜೀರಿಗೆ, ಕರಿಮೆಣಸು, ಕೊತ್ತಂಬರಿ ಸೊಪ್ಪು, ಉಪ್ಪು, ಕರಿಬೇವಿನ ಎಲೆ, ಹಸಿ ಮೆಣಸು, ಜೀರಿಗೆ ಪುಡಿ, ಚಾಟ್ ಮಸಾಲಾ ಮತ್ತು ಶುಂಠಿ ಹಾಕಲಾಗುತ್ತದೆ. ಇದನ್ನು ಹೆಚ್ಚಾಗಿ ಊಟದ ಬಳಿಕ ಸೇವಿಸಲಾಗುತ್ತದೆ. ಆದರೆ ಬೇಸಿಗೆಯಲ್ಲಿದಿನವಿಡಿ ಇದನ್ನು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ಇದು ಎಷ್ಟೆಲ್ಲಾ ಆರೋಗ್ಯ ಲಾಭಗಳನ್ನು ನೀಡುವುದು ಎಂದು ತಿಳಿಯುವ.
ಕೊಬ್ಬು ಕರಗಿಸುವುದು
- ಮೃಷ್ಟಾನ ಭೋಜನ ಮಾಡಿ ಹೊಟ್ಟೆ ಭಾರವಾಗಿದ್ದರೆ, ಆಗ ಒಂದು ಲೋಟ ಮಜ್ಜಿಗೆ ಕುಡಿಯಬೇಕು. ಈ ಮಸಾಲ ಮಜ್ಜಿಗೆಯಲ್ಲಿ ಇರುವಂತಹ ಶುಂಠಿ, ಕರಿಮೆಣಸು ಮತ್ತು ಇತರ ಕೆಲವು ಮಸಾಲೆಗಳು ಜೀರ್ಣಕ್ರಿಯೆಗೆ ಸಹಕಾರಿ ಮತ್ತು ಅಹಿತಕರ ಭಾವನೆ ತಗ್ಗಿಸುವುದು.
- ಇದರ ಹೊರತಾಗಿ ಮಜ್ಜಿಗೆಯು ಕೊಬ್ಬು, ಎಣ್ಣೆ ಮತ್ತು ತುಪ್ಪವನ್ನು ಅನ್ನನಾಳದ ಒಳಪದರ ಮತ್ತು ಹೊಟ್ಟೆಯಿಂದ ಹೊರಗೆ ಹಾಕುವುದು.
ಜೀರ್ಣಕ್ರಿಯೆಗೆ ಸಹಕಾರಿ
- ಶುಂಠಿ, ಕರಿಮೆಣಸು ಮತ್ತು ಜೀರಿಗೆಯು ಜೀರ್ಣಕ್ರಿಯೆಗೆ ಸಹಕಾರಿ. ಇದೆಲ್ಲವೂ ಸೇರಿಕೊಂಡು ಮಸಾಲೆ ಮಜ್ಜಿಗೆಯಲ್ಲಿ ಇನ್ನಷ್ಟು ಗುಣಗಳನ್ನು ಸೇರಿಸುವುದು.
- ಹೀಗಾಗಿ ಇದು ನೈಸರ್ಗಿಕ ಜೀರ್ಣಕ್ರಿಯೆ ಪಾನೀಯವಾಗುವುದು. ಅಜೀರ್ಣದ ಸಮಸ್ಯೆಯು ಕಾಡುತ್ತಲಿದ್ದರೆ, ಆಗ ನೀವು ಮಜ್ಜಿಗೆ ಬಳಸಿ.
- ಕ್ಯಾಲ್ಸಿಯಂ ನೀಡುವುದು
- ಲ್ಯಾಕ್ಟೋಸ್ ಸೂಕ್ಷ್ಮತೆ ಇರುವಂತಹ ಜನರಿಗೆ ಹಾಲು ಕುಡಿದರೆ ಆಗಲ್ಲ. ಹೀಗಾಗಿ ಕ್ಯಾಲ್ಸಿಯಂ ಕೊರತೆ ಕಾಡಬಹುದು. ಇದಕ್ಕಾಗಿ ಮಜ್ಜಿಗೆ ಕುಡಿದರೆ ಸಹಕಾರಿ.
- ಇದು ಲ್ಯಾಕ್ಟೋಸ್ ಸೂಕ್ಷ್ಮತೆ ಇರುವವರಿಗೂ ಕ್ಯಾಲ್ಸಿಯಂ ನೀಡುವುದು. ಇದನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಆಗ ಹಾಲಿನಿಂದ ಸಿಗದೆ ಇರುವಂತಹ ಕ್ಯಾಲ್ಸಿಯಂ ಮಜ್ಜಿಗೆಯಿಂದ ಸಿಗುವುದು.
ಬಿ ಸಂಕೀರ್ಣ ಮತ್ತು ಇತರ ವಿಟಮಿನ್ ಗಳು
ಮಜ್ಜಿಗೆಯಲ್ಲಿ ಹಲವಾರು ರೀತಿಯ ವಿಟಮಿನ್ ಗಳಿದ್ದು, ಇದರಲ್ಲಿ ವಿಟಮಿನ್ ಬಿ ಸಂಕೀರ್ಣ, ಪ್ರೋಟೀನ್ ಮತ್ತು ಪೊಟಾಶಿಯಂ ಇದೆ. ವಿಟಮಿನ್ ಬಿ ರಿಬೊಫ್ಲಾವಿನ್ ಆಗಿದ್ದು, ಇದು ಆಹಾರದಿಂದ ದೇಹಕ್ಕೆ ಶಕ್ತಿ ನೀಡುವುದು. ವಿಟಮಿನ್ ಕೊರತೆ ಸಮಸ್ಯೆಯಿದ್ದರೆ ನೀಗಿಸುವುದು.
ರಕ್ತದೊತ್ತಡ ತಗ್ಗಿಸುವುದು
ಮಜ್ಜಿಗೆಯಲ್ಲಿ ಕಂಡುಬರುವಂತಹ ಎಂಎಫ್ ಜಿಎಂ ಅಂಶವು ಬಯೋಆಕ್ಟಿವ್ ಪ್ರೋಟೀನ್ ಆಗಿದ್ದು, ಇದು ಕೊಲೆಸ್ಟ್ರಾಲ್, ಸೋಂಕು, ಬ್ಯಾಕ್ಟೀರಿಯಾ ವಿರೋಧಿ ಮತ್ತು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ. ಇದು ಗಣನೀಯವಾಗಿ ರಕ್ತದೊತ್ತಡ ಕಡಿಮೆ ಮಾಡಿದೆ ಎಂದು ಅಧ್ಯಯನಗಳು ಹೇಳಿವೆ.