ನವದೆಹಲಿ: ನೈಜ ಕೋಮುವಾದಿ ಗುಂಪುಗಳಿಗೆ ಜಾತ್ಯಾತೀತರು ಅಂತ ಟೈಟಲ್ ಕೊಟ್ಟು ಬಣ್ಣಿಸುತ್ತಿರುವ ರಾಹುಲ್ ಗಾಂಧಿ ನಡೆ ಹಾಸ್ಯಾಸ್ಪದವಾಗಿದ್ದು, ಅವರು ಇದಕ್ಕೆ ತಕ್ಷಣ ಅಂತ್ಯ ಹಾಡಲಿ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಆಗ್ರಹಿಸಿದ್ದಾರೆ. ವಿದೇಶಿ ನೆಲದಲ್ಲಿ ಹಿಂದು ಸಂಘಟನೆಗಳನ್ನ ಟೀಕಿಸಿರುವ ರಾಹುಲ್ ಗಾಂಧಿ (Rahul Gandhi) ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಲ್ಹಾದ್ ಜೋಶಿ (Pralhad Josh), ರಾಹುಲ್ ಗಾಂಧಿ ಮೊದಲು ಯಾರು ಕೋಮುವಾದಿ (Communalist), ಯಾರು ಜಾತ್ಯಾತೀತರು (Secular)? ಎಂಬುದನ್ನ ಅರಿತಿಕೊಳ್ಳಲಿ ಎಂದಿದ್ದಾರೆ.
ದೇಶದಲ್ಲಿ ಕೋಮುವಾದವನ್ನ ಬಿತ್ತುತ್ತಿರುವ ನೈಜ ಕೋಮುವಾದಿ ಮುಸ್ಲಿಂ ಲೀಗ್ ಪಕ್ಷಗಳನ್ನ ಜಾತ್ಯಾತೀತರು ಎಂದು ನಕಲಿ ಗಾಂಧಿ ಬಣ್ಣಿಸುತ್ತಿರುವುದು ಹಾಸ್ಯಾಸ್ಪದವಾಗಿದೆ. ದೇಶದ ವಿಭಜನೆಗೆ ಹಾಗೂ ಲಕ್ಷಾಂತರ ಜನರ ಸಾವಿಗೆ ಕಾರಣವಾದ ಪಕ್ಷದವರು ಜಾತ್ಯಾತೀತರು ಹೇಗೆ ಆಗುತ್ತಾರೆ? ಆ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡವರಿಗೆ ರಾಹುಲ್ ಗಾಂಧಿ ಮಾಡಿದ ಅತ್ಯಂತ ದೊಡ್ಡ ಅವಮಾನವಿದು. ಇವರ ತುಷ್ಟಿಕರಣದ ರಾಜಕೀಯಕ್ಕೆ ಕೊನೆಯೇ ಇಲ್ಲ ಎಂದು ಪ್ರಲ್ಹಾದ್ ಜೋಶಿ ಕಿಡಿಕಾರಿದ್ದಾರೆ.