ಬೆಂಗಳೂರು: 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿರುವ ಸ್ಟಾರ್ ಆಲ್ರೌಂಡರ್ ಕ್ಯಾಮೆರಾನ್ ಗ್ರೀನ್ ಅವರು ಬೆಂಗಳೂರು ಕಿಡ್ನಿ ಫೌಂಡೇಷನ್ಗೆ ಭೇಟಿ ನೀಡಿದ್ದಾರೆ ಹಾಗೂ ದೀರ್ಘಾವಧಿ ಮೂತ್ರಪಿಂಡ ಕಾಯಿಲೆ ಬಗ್ಗೆ ಅರಿವು ಮೂಡಿಸಿದ್ದಾರೆ.
ಕ್ಯಾಮೆರಾನ್ ಗ್ರೀನ್ ಅವರು ದೀರ್ಘಾವಧಿ ಮೂತ್ರಪಿಂಡ ಕಾಯಲೆಯಿಂದ ಹೋರಾಟ ನಡೆಸುತ್ತಿದ್ದಾರೆ. ಈ ಬಗ್ಗೆ ಆಸೀಸ್ ಆಲ್ರೌಂಡರ್ ಇತ್ತೀಚೆಗೆ ಬಹಿರಂಗಪಡಿಸಿದ್ದರು. ಗ್ರೀನ್ ಅವರು ಹುಟ್ಟಿನಿಂದಲೇ ಎರಡನೇ ಹಂತದ ಮೂತ್ರಪಿಂಡ ಕಾಯಿಲೆಯನ್ನು ಹೊಂದಿದ್ದರು. ಈ ಬಗ್ಗೆ ತಮ್ಮ ಬಾಲ್ಯದಲ್ಲಿಯೇ ಅವರಿಗೆ ಅರಿವಾಗಿತ್ತು.
12ನೇ ವಯಸ್ಸಿನಲ್ಲಿದ್ದಾಗ ಮೂತ್ರಪಿಂಡ ಕಾಯಿಲೆ ಇರುವ ಬಗ್ಗೆ ವೈದ್ಯರು ಆಸೀಸ್ ಆಟಗಾರನ ಪೋಷಕರಿಗೆ ತಿಳಿಸಿದ್ದರು. 2023ರ ವರೆಗೂ ಕ್ಯಾಮೆರಾನ್ ಗ್ರೀನ್ ಅವರು ಈ ಬಗ್ಗೆ ಬಹಿರಂಗಪಡಿಸಿರಲಿಲ್ಲ. ಆಸ್ಟ್ರೇಲಿಯಾ ತಂಡವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಪ್ರತಿನಿಧಿಸುವ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಗ್ರೀನ್ ಕಡ್ಡಾಯ ಆಹಾರ ಪದ್ದತಿಯನ್ನು ಪಾಲಿಸುತ್ತಿದ್ದಾರೆ.