ಕೆನಡಾದ ರಾಜಧಾನಿ ಒಟ್ಟಾವದಲ್ಲಿನ ಮನೆಯೊಂದರಲ್ಲಿ 19 ವರ್ಷದ ವಿದ್ಯಾರ್ಥಿಯೋರ್ವ 4 ಮಕ್ಕಳ ಸಹಿತ 6 ಮಂದಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬರ್ಹಾವೆನ್ನ ನೈಋತ್ಯದಲ್ಲಿರುವ ಪ್ರದೇಶದಲ್ಲಿನ ಮನೆಯಲ್ಲಿ ನಡೆದಿದೆ.
19 ವರ್ಷದ ವಿದ್ಯಾರ್ಥಿ ಫೆಬ್ರಿಯೊ ಡಿಝೊಯ್ಸಾ ಆರೋಪಿ ಎಂದು ಗುರುತಿಸಲಾಗಿದೆ. ಈತ ಶ್ರೀಲಂಕಾದ ಪ್ರಜೆಯಾಗಿದ್ದು ಸಂತ್ರಸ್ತ ಕುಟುಂಬದವರು ಇತ್ತೀಚೆಗೆ ಕೆನಡಾಕ್ಕೆ ಆಗಮಿಸಿದ್ದರು ಎನ್ನಲಾಗುತ್ತಿದೆ.
ಆರೋಪಿ ಸಂತ್ರಸ್ತ ಕುಟುಂಬದವರ ಪರಿಚಯಸ್ಥನಾಗಿದ್ದು ಅವರ ಮನೆಯಲ್ಲೇ ವಾಸವಿದ್ದ. ಇತ್ತೀಚೆಗೆ ಯಾವುದೋ ಕಾರಣಕ್ಕೆ ಮನೆಯವರೊಂದಿಗೆ ಆರೋಪಿಯು ಜಗಳವಾಡಿದ್ದು ಬಳಿಕ ಈತ ಹರಿತವಾದ ಆಯುಧದಿಂದ ಮನೆಯಲ್ಲಿದ್ದ 6 ಮಂದಿಯನ್ನು ಇರಿದು ಹತ್ಯೆ ಮಾಡಿದ್ದಾನೆ.
35 ವರ್ಷದ ಮಹಿಳೆ, 7 ವರ್ಷದ ಬಾಲಕ, 4 ವರ್ಷದ ಬಾಲಕಿ, ಎರಡೂವರೆ ವರ್ಷದ ಹೆಣ್ಣು ಮಗು ಮತ್ತು ಕುಟುಂಬದ ಪರಿಚಯಸ್ಥನಾಗಿರುವ 40 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಕುಟುಂಬದ ಯಜಮಾನ ಚೂರಿ ಇರಿತದಿಂದ ಗಾಯಗೊಂಡಿದ್ದರೂ ಹೊರಗೆ ಓಡಿ ತಪ್ಪಿಸಿಕೊಂಡಿದ್ದು ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ವರದಿಯಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು ಕೊಲೆ ಮತ್ತು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.