ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜಾರ್ನ ಹತ್ಯೆಯಾಗಿ ಒಂದು ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ಕೆನಡಾ ತನ್ನ ಹೌಸ್ ಆಫ್ ಕಾಮನ್ಸ್ನಲ್ಲಿ ಮೌನಾಚರಣೆ ನಡೆಸುವ ಮೂಲಕ ಉಗ್ರನಿಗೆ ಗೌರವ ಸಲ್ಲಿಸಿದೆ. ಈ ಮೂಲಕ ಕೆನಡ ಮತ್ತೆ ತನ್ನ ಉದ್ದಟತನ ಪ್ರದರ್ಶಿಸಿದೆ.
ಕೆನಡಾ ಸಂಸತ್ತಿನ ನಡೆಗೆ ಭಾರತ ಖಡಕ್ ಪ್ರತಿಕ್ರಿಯೆ ನೀಡಿದೆ. ವ್ಯಾಂಕೋವರ್ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್, 1985ರಲ್ಲಿ ಏರ್ ಇಂಡಿಯಾ ಕನಿಷ್ಕಾ ವಿಮಾನದಲ್ಲಿ ಖಲಿಸ್ತಾನಿ ಉಗ್ರರು ಬಾಂಬ್ ದಾಳಿ ನಡೆಸಿದ್ದರಿಂದ ಬಲಿಯಾಗಿದ್ದ 329 ಸಂತ್ರಸ್ತರಿಗೆ ಗೌರವ ಸಲ್ಲಿಸಲು ಅವರ ಸ್ಮರಣಾರ್ಥ ಸೇವೆ ನಡೆಸುವುದಾಗಿ ಘೋಷಿಸಿದೆ.
ಕೆನಡಾ ಹರ್ದೀಪ್ ಸಿಂಗ್ಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರತಿಯಾಗಿ ವ್ಯಾಂಕೋವರ್ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ 1985ರಲ್ಲಿ ಏರ್ ಇಂಡಿಯಾ ಕಾನಿಷ್ಕಾ ವಿಮಾನದ ಮೇಲೆ ಖಲಿಸ್ತಾನಿ ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದ 329 ಜನರನ್ನು ಸ್ಮರಿಸಲು ತೀರ್ಮಾನಿಸಿದೆ. ಭಾನುವಾರ ಸಂಜೆ 6:30ಕ್ಕೆ ಸ್ಟಾನ್ಲಿ ಪಾರ್ಕ್ನ ಸೆಪರ್ಲಿ ಆಟದ ಮೈದಾನದಲ್ಲಿ ಮೌನಾಚರಣೆ ನಡೆಸಲು ಭಾರತ ತೀರ್ಮಾನಿಸಿದೆ.
ಭಯೋತ್ಪಾದನೆಯ ಪಿಡುಗನ್ನು ಎದುರಿಸುವಲ್ಲಿ ಭಾರತವು ಮುಂಚೂಣಿಯಲ್ಲಿ ನಿಂತಿದೆ. ಜಾಗತಿಕವಾಗಿ ಉಗ್ರಗಾಮಿಗಳ ಬೆದರಿಕೆಯನ್ನು ನಿಭಾಯಿಸಲು ಎಲ್ಲ ರಾಷ್ಟ್ರಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ ಎಂದು ವ್ಯಾಂಕೋವರ್ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ತಿಳಿಸಿದೆ.
ಮಾಂಟ್ರಿಯಲ್ನಿಂದ ಲಂಡನ್ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ನೆಲದಿಂದ 31 ಸಾವಿರ ಅಡಿ ಎತ್ತರದಲ್ಲಿ ಇದ್ದಾಗ ಸ್ಫೋಟಿಸಲಾಗಿತ್ತು. ಕೆನಡಾದ ಸಿಖ್ ಉಗ್ರರು ವಿಮಾನದಲ್ಲಿ ಬಾಂಬ್ ಇರಿಸಿದ್ದರು. ಮೃತಪಟ್ಟ 329 ಪ್ರಯಾಣಿಕರಲ್ಲಿ 268 ಕೆನಡಾ ಪ್ರಜೆಗಳು, 27 ಬ್ರಿಟಿಷ್ ನಾಗರಿಕರು ಮತ್ತು 24 ಭಾರತೀಯ ಪ್ರಜೆಗಳಿದ್ದರು. ಇದು ವಿಮಾನಯಾನ ಭಯೋತ್ಪಾದನೆಯ ಅತ್ಯಂತ ಭೀಕರ ದಾಳಿಗಳಲ್ಲಿ ಒಂದೆನಿಸಿಕೊಂಡಿತ್ತು.
ಭಯೋತ್ಪಾದನಾ ಕೃತ್ಯಗಳಲ್ಲಿ ಭಾರತಕ್ಕೆ ಬೇಕಿದ್ದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜಾರ್ನನ್ನು 2023ರ ಜೂನ್ 18ರಂದು ಬ್ರಿಟಿಷ್ ಕೊಲಂಬಿಯಾದಲ್ಲಿರುವ ಗುರುದ್ವಾರದ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಭಾರತ ಸರ್ಕಾರದ ಏಜೆಂಟ್ಗಳು ಈ ಹತ್ಯೆಯಲ್ಲಿ ಭಾಗಿಯಾಗಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ್ದರು. ಈ ಆರೋಪಗಳನ್ನು ಭಾರತ ತಿರಸ್ಕರಿಸಿದ್ದು, ಇದು ಕುಮ್ಮಕ್ಕಿನ ಹಾಗೂ ಅಸಂಬಂಧ ಆರೋಪ ಎಂದಿದೆ. ನಿಜ್ಜಾರ್ನನ್ನು ಭಯೋತ್ಪಾದಕ ಎಂದು ಕರೆಯಲು ಒಪ್ಪದ ಕೆನಡಾ, ಆತನನ್ನು ತನ್ನ ಪ್ರಜೆ ಎಂದೇ ಹೇಳಿಕೊಳ್ಳುತ್ತಿದೆ.