ಟೊರಾಂಟೊ: ಭಾರತ ಜತೆಗಿನ ರಾಜತಾಂತ್ರಿಕ ಬಿಕ್ಕಟ್ಟು ವಿಚಾರವನ್ನು ಕೆನಡಾ ಸರಕಾರ, ಯುಎಇ ಬಳಿಕ ಈಗ ಜೋರ್ಡಾನ್ ಸರಕಾರದ ಮುಂದೆ ಪ್ರಸ್ತಾಪಿಸಿದೆ. ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ‘ರಾ’ ಏಜೆಂಟರ ಪಾತ್ರವಿದೆ ಎಂದು ಆರೋಪಿಸುತ್ತಲೇ ಬಂದಿರುವ ಕೆನಡಾ, ಇದೇ ವಿಚಾರವನ್ನು ಅರಬ್ ರಾಷ್ಟ್ರಗಳ ಮುಂದೆಯೂ ಪ್ರಸ್ತಾಪಿಸಿ ಅಪಪ್ರಚಾರ ಮುಂದುವರಿಸಿದೆ.
ಎರಡು ದಿನಗಳ ಹಿಂದಷ್ಟೇ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಯುಎಇ ದೊರೆ ಶೇಖ್ ಮೊಹಮ್ಮದ್ ಬಿನ್ ಜಾಯೇದ್ ಅವರಿಗೆ ದೂರವಾಣಿ ಕರೆ ಮಾಡಿ, ”ತಮ್ಮ ದೇಶವು ನೆಲದ ಕಾನೂನು ಕಾಪಾಡುವತ್ತ ಮೊದಲ ಆದ್ಯತೆ ನೀಡುತ್ತದೆ. ರಾಜತಾಂತ್ರಿಕ ಸಂಬಂಧಗಳನ್ನು ವಿಯೆನ್ನಾ ಒಪ್ಪಂದದಂತೆ ಎಲ್ಲ ರಾಷ್ಟ್ರಗಳೂ ಗೌರವಿಸುವ ಅಗತ್ಯವಿದೆ,” ಎಂದು ಹೇಳಿದ್ದರು. ಈ ಮೂಲಕ ಭಾರತ- ಕೆನಡಾ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ವಿಚಾರದಲ್ಲಿ ಕೆನಡಾ ನಿಲುವನ್ನು ಬೆಂಬಲಿಸುವಂತೆ ಪರೋಕ್ಷವಾಗಿ ಮನವಿ ಮಾಡಿಕೊಂಡಿದ್ದರು.
ಜೋರ್ಡಾನ್ ದೊರೆ ಅಬ್ದುಲ್ಲಾ ಎರಡನೇ ಬಿನ್ ಹುಸೇನ್ ಅವರಿಗೆ ದೂರವಾಣಿ ಕರೆ ಮಾಡಿದ ಕೆನಡಾ ಪ್ರಧಾನಿ ಟ್ರುಡೊ ಅವರು, ವಿಯೆನ್ನಾ ಒಪ್ಪಂದ ಪ್ರಸ್ತಾಪಿಸಿ ಭಾರತ- ಕೆನಡಾ ರಾಜತಾಂತ್ರಿಕ ಬಿಕ್ಕಟ್ಟಿನ ಕುರಿತು ಚರ್ಚಿಸಿದ್ದರು. ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ತಮ್ಮ ಆರೋಪವನ್ನು ಬೆಂಬಲಿಸುವಂತೆ ಟ್ರುಡೊ, ಜೋರ್ಡಾನ್ ದೊರೆಗೆ ಪರೋಕ್ಷವಾಗಿ ಕೋರಿಕೊಂಡಿದ್ದರು ಎಂದು ಮೂಲಗಳು ಹೇಳಿವೆ.
ಆದರೆ ಜೋರ್ಡಾನ್ ದೊರೆಯ ಕಚೇರಿ ಹೊರಡಿಸಿದ ಪತ್ರಿಕಾ ಹೇಳಿಕೆಯಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾಪ ಆಗಿಲ್ಲ. ದೂರವಾಣಿ ಮಾತುಕತೆಯಲ್ಲಿ ಟ್ರುಡೊ ಅವರು ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಯನ್ನು ಖಂಡಿಸಿದ್ದು, ಇಸ್ರೇಲ್ ಪರ ಕೆನಡಾ ಇರಲಿದೆ ಎಂದು ಸ್ಪಷ್ಟಪಡಿಸಿದ್ದರು ಎಂದೂ ವರದಿಯಾಗಿದೆ.