ಮೋರ್ಗನ್ಟೌನ್: ಅಮೆರಿಕದಾದ್ಯಂತ ಆಸ್ಪತ್ರೆಗಳಲ್ಲಿರುವ ರೋಗಿಗಳು ‘ಕ್ಯಾಂಡಿಡಾ ಔರಿಸ್’ ಎಂಬ ಹೆಸರಿನ ಶಿಲೀಂಧ್ರ ಸೋಂಕಿನ ಅಲರ್ಜಿಗೆ ತುತ್ತಾಗಿ ಸಾವಿಗೀಡಾಗುತ್ತಿದ್ದು, ಈ ಸೋಂಕು ತೀವ್ರವಾಗಿ ಹಬ್ಬುತ್ತಿದೆ. ಆದ್ದರಿಂದ ಎಚ್ಚರದಿಂದ ಇರಬೇಕೆಂದು ಅಮೆರಿಕದ ರೋಗ ನಿಯಂತ್ರಣ ಕೇಂದ್ರ ತಿಳಿಸಿದೆ.
ಇತ್ತೀಚೆಗೆ ಪತ್ತೆಯಾದ ಈ ರೋಗಕಾರಕ ಫಂಗಸ್ ಪ್ರಮಾಣದಲ್ಲಿ ಅನಿರೀಕ್ಷಿತ ಏರಿಕೆ ಕಂಡುಬರುತ್ತಿದ್ದು ಮುಖ್ಯವಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಅಲರ್ಜಿ ಉಂಟುಮಾಡಿ ಅವರ ಸಾವಿಗೆ ಕಾರಣವಾಗಿರುವುದು, ಅಮೆರಿಕದ ಜನತೆಗೆ ಆತಂಕವನ್ನುಂಟು ಮಾಡಿದೆ.
ಕ್ಯಾಂಡಿಡಾ ಔರಿಸ್ ಮೊದಲ ಬಾರಿಗೆ 2009ರಲ್ಲಿ ಕಂಡುಬಂದಿದ್ದು ಇದು ಏಕಕೋಶ ಶಿಲೀಂಧ್ರವಾಗಿದ್ದು, 2019ರಿಂದ ಅಮೆರಿಕದಲ್ಲಿ ಈ ಸೋಂಕಿನ ಪ್ರಮಾಣದಲ್ಲಿ ಹೆಚ್ಚಳಕಂಡುಬರುತ್ತಿದೆ. ಮನುಷ್ಯನ ಜೀವಕ್ಕೇ ಅಪಾಯ ತಂಡೊಡ್ಡುವ ಕ್ಯಾಂಡಿಡಾ, ಸದ್ಯಕ್ಕಿರುವ ಫಂಗಸ್ ನಿರೋಧಕ ಔಷಧಗಳ ವಿರುದ್ಧ ಪ್ರತಿರೋಧಿಸುವ ಸಾಮರ್ಥ್ಯ ಹೊಂದಿದೆ.