ನವದೆಹಲಿ: ಸಲಿಂಗ ವಿವಾಹಗಳು (Same-Sex Marriage) ನಗರ ಗಣ್ಯರ ಅಥವಾ ಶ್ರೀಮಂತರ ಪರಿಕಲ್ಪನೆಗಳಲ್ಲ (Elitist Concept) ಎಂದು ಸುಪ್ರೀಂ ಕೋರ್ಟ್ (Supreme Court) ಮುಖ್ಯ ನ್ಯಾಯಮೂರ್ತಿ (CJI) ಡಿ.ವೈ ಚಂದ್ರಚೂಡ್ (D.Y Chandrachud) ಬುಧವಾರ ಅಭಿಪ್ರಾಯಪಟ್ಟಿದ್ದಾರೆ. ಸಲಿಂಗ ವಿವಾಹಗಳಿಗೆ ಕಾನೂನಿನ ಮಾನ್ಯತೆ ನೀಡುವ ಬಗ್ಗೆ ಸಾಂವಿಧಾನಿಕ ಪೀಠದಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಅವರು ಇಂತಹದ್ದೊಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಲಿಂಗ ವಿವಾಹಗಳನ್ನು ಅಂಗೀಕರಿಸುವ ಅರ್ಜಿದಾರರು ನಗರ ಗಣ್ಯರ ಅಭಿಪ್ರಾಯಗಳನ್ನು ಪ್ರತಿನಿಧಿಸುತ್ತಾರೆ ಎಂದು ಕೇಂದ್ರ ಸರ್ಕಾರ (Central Government) ಅಭಿಪ್ರಾಯ ವ್ಯಕ್ತಪಡಿಸಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಿಜೆಐ ಚಂದ್ರಚೂಡ್, ನಗರ ಪ್ರದೇಶಗಳಲ್ಲಿ ವಾಸಿಸುವ ಹೆಚ್ಚಿನ ಜನರು ತಮ್ಮ ಲೈಂಗಿಕ ಗುರುತಿನ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಹಾಗೆಂದು ಇದು ಸಲಿಂಗ ವಿವಾಹ ಪರಿಕಲ್ಪನೆಗಳು ಅಥವಾ ಬೇಡಿಕೆಗಳು ಎಂದು ತೋರಿಸಲು ಸರ್ಕಾರದ ಬಳಿ ಸೂಕ್ತ ಅಂಕಿ ಅಂಶಗಳ ದಾಖಲೆ ಇದೆ ಎಂಬ ಅರ್ಥವಲ್ಲ ಎಂದು ಅವರು ಹೇಳಿದ್ದಾರೆ.
ಸರ್ಕಾರವು ವ್ಯಕ್ತಿಯ ನಿಯಂತ್ರಣ ಹೊಂದಿರದ ಗುಣಲಕ್ಷಣದ ಆಧಾರದ ಮೇಲೆ ವ್ಯಕ್ತಿಯ ವಿರುದ್ಧ ತಾರತಮ್ಯ ಮಾಡುವಂತಿಲ್ಲ. ನೀವು ಅದನ್ನು ಸಹಜ ಗುಣಲಕ್ಷಣಗಳೆಂದು ನೋಡಿದಾಗ, ಅದು ನಗರ ಗಣ್ಯರ ಪರಿಕಲ್ಪನೆಯನ್ನು ವಿರೋಧಿಸುತ್ತದೆ. ಸಲಿಂಗ ವಿವಾಹವು ನಗರ ಗಣ್ಯರ ಪರಿಕಲ್ಪನೆಯಾಗಿದೆ ಎಂದು ತೋರಿಸಲು ಸರ್ಕಾರವು ಯಾವುದೇ ದತ್ತಾಂಶ ಹೊಂದಿಲ್ಲ ಎಂದಿದ್ದಾರೆ. ಸಲಿಂಗ ವಿವಾಹ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ಗೆ ಕೇಂದ್ರ ಸರ್ಕಾರವು ಹೆಚ್ಚುವರಿ ಅಫಿಡವಿಟ್ (Affidavit) ಸಲ್ಲಿಸಿತ್ತು.
ಸಾಮಾಜಿಕ ಸ್ವೀಕಾರದ ಉದ್ದೇಶಕ್ಕಾಗಿ ಕೇವಲ ನಗರ ಗಣ್ಯರು ಅಥವಾ ಶ್ರೀಮಂತರ ದೃಷ್ಟಿಕೋನಗಳನ್ನು ಅರ್ಜಿದಾರರು ಪ್ರತಿನಿಧಿಸುತ್ತಿದ್ದಾರೆ. ಶಾಸಕಾಂಗವು ಸಮಾಜದ ಎಲ್ಲಾ ವರ್ಗಗಳ ವಿಶಾಲ ದೃಷ್ಟಿಕೋನಗಳನ್ನು ಪರಿಗಣಿಸಬೇಕಾಗುತ್ತದೆ ಎಂದು ಹೇಳಿಕೊಂಡಿತ್ತು. ಅಲ್ಲದೇ ಪ್ರಕರಣದಲ್ಲಿ ಎಲ್ಲಾ ರಾಜ್ಯ ಸರ್ಕಾರ (State Government) ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಸೇರಿಸಿಕೊಳ್ಳಬೇಕು. ಇದು ಅವುಗಳ ವ್ಯಾಪ್ತಿಯಲ್ಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.