ಬಾಲಿವುಡ್ ಬ್ಯೂಟಿ ನಟಿ ತಾಪ್ಸಿ ಪನ್ನು ಮದುವೆಯ ವಿಚಾರವಾಗಿ ಸಖತ್ ಸುದ್ದಿಯಲ್ಲಿದ್ದಾರೆ. ತಾಪ್ಸಿ ಬಹುಕಾಲದ ಗೆಳೆಯನನ್ನು ವರಿಸಲಿದ್ದು ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ, ಈ ಬಗ್ಗೆ ನಟಿ ತಾಪ್ಸಿ ಪ್ರತಿಕ್ರಿಯೆ ನೀಡಿದ್ದಾರೆ.
ತಾಪ್ಸಿ ಪನ್ನು ಅವರು ಬ್ಯಾಡ್ಮಿಂಟನ್ ಆಟಗಾರ ಮಥಾಯಸ್ ಬೋ ಜೊತೆ 10 ವರ್ಷದಿಂದ ಪ್ರೀತಿಯಲ್ಲಿದ್ದಾರೆ. ಈ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಇವರು ಶೀಘ್ರವೇ ಹಸೆಮಣೆ ಏರಲಿದ್ದಾರೆ ಎನ್ನಲಾಗಿತ್ತು. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ತಾಪ್ಸಿ ಪನ್ನು, ‘ನನ್ನ ವೈಯಕ್ತಿಕ ವಿಚಾರದಲ್ಲಿ ನಾನು ಎಂದಿಗೂ ಸ್ಪಷ್ಟನೆ ನೀಡಲ್ಲ’ ಎಂದಿದ್ದಾರೆ.
ತಾಪ್ಸಿ ಪನ್ನು ಅವರು ಈ ವರ್ಷ ಮಾರ್ಚ್ ತಿಂಗಳಲ್ಲಿ ಮಥಾಯಸ್ ಬೋ ಅವರನ್ನು ಮದುವೆ ಆಗಲಿದ್ದಾರೆ ಎಂದು ವರದಿ ಆಗಿತ್ತು. ಅಷ್ಟೇ ಅಲ್ಲ, ಸಿಖ್ ಹಾಗೂ ಕ್ರೈಸ್ತ ಸಮುದಾಯದ ಸಂಪ್ರದಾಯದಂತೆ ಈ ವಿವಾಹ ನೆರವೇರಲಿದೆ ಎಂದು ವರದಿ ಆಗಿತ್ತು. ಈ ಜೋಡಿಯ ಮದುವೆ ಉದಯಪುರದಲ್ಲಿ ನಡೆಯಲಿದ್ದು ಕೇವಲ ಎರಡು ಕುಟುಂಬದವರನ್ನು ಮಾತ್ರವೇ ಆಹ್ವಾನಿಸಲಾಗಿದೆ ಎಂದು ವರದಿಯಾಗಿದೆ. ಈ ವಿಚಾರವನ್ನು ತಾಪ್ಸಿ ಪನ್ನು ಅವರು ಒಪ್ಪಿಯೂ ಇಲ್ಲ ಅದನ್ನು ಅಲ್ಲಗಳೆದೂ ಇಲ್ಲ.
ನಟಿಯರು ಸಾರ್ವಜನಿಕ ಜೀವನದಲ್ಲಿ ಇದ್ದಾಗ ಅವರ ಬಗ್ಗೆ ಒಂದಷ್ಟು ಸುದ್ದಿಗಳು ಹರಿದಾಡುತ್ತವೆ. ಕೆಲವು ಸೆಲೆಬ್ರಿಟಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದರೆ, ಇನ್ನೂ ಕೆಲವರು ಸೈಲೆಂಟ್ ಆಗಿರುತ್ತಾರೆ. ಅದೇ ರೀತಿ ತಾಪ್ಸಿ ಪನ್ನು ಕೂಡ ತಮ್ಮದೇ ನಿಯಮ ಹಾಕಿಕೊಂಡಿದ್ದಾರೆ. ಅವರು ಎಂದಿಗೂ ತಮ್ಮ ವೈಯಕ್ತಿಕ ವಿಚಾರದಲ್ಲಿ ಸ್ಪಷ್ಟನೆ ನೀಡುವುದಿಲ್ಲ. ಅದೇ ಮಾತನ್ನು ಮತ್ತೊಮ್ಮೆ ಪುನರುಚ್ಛರಿಸಿದ್ದಾರೆ. ‘ನನ್ನ ವೈಯಕ್ತಿಕ ವಿಚಾರದಲ್ಲಿ ನಾನು ಈವರೆಗೆ ಸ್ಪಷ್ಟನೆ ನೀಡಿಲ್ಲ, ಮುಂದೆ ನೀಡುವುದೂ ಇಲ್ಲ’ ಎಂದಿದ್ದಾರೆ.
ಮಥಾಯಸ್ ಬೋ ಅವರು ಭಾರತದ ಬ್ಯಾಡ್ಮಿಂಟನ್ ಕೋಚ್ ಆಗಿದ್ದಾರೆ. ಕಳೆದ 10 ವರ್ಷಗಳಿಂದ ತಾಪ್ಸಿ ಹಾಗೂ ಮಥಾಯಸ್ ಡೇಟಿಂಗ್ ಮಾಡುತ್ತಿದ್ದಾರೆ. 2013ರಲ್ಲಿ ತಾಪ್ಸಿ ಹಾಗೂ ಮಥಾಯಸ್ ಬೋ ಭೇಟಿಯಾಗಿದ್ದು ಆ ಬಳಿಕ ಸ್ನೇಹಿತರಾಗಿ ಮತ್ತೆ ಇಬ್ಬರ ಮಧ್ಯೆ ಪ್ರೀತಿ ಹುಟ್ಟಿಕೊಂಡಿದೆ. ಸದ್ಯ ತಾಪ್ಸಿ ‘ವೋ ಲಡ್ಕಿ ಹೇ ಕಹಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.