ಬಹುತೇಕರ ಜೀವನದಲ್ಲಿರುವ ಮಿಲಿಯನ್ ಡಾಲರ್ ಪ್ರಶ್ನೆ ಎಂದರೆ ತೂಕ ಇಳಿಸುವುದು ಹೇಗೆ ಎಂಬುದು. ಯಾಕೆಂದರೆ, ಅನೇಕರು, ತಮ್ಮ ತೂಕ ಇಳಿಕೆಯ, ಬದಲಾಗಿ ಬಳುಕುವ ಬಳ್ಳಿಯಂತಾದ ದೇಹವನ್ನು ಬಳುಕಿಸುತ್ತಾ ರೀಲ್ಸ್ ಮಾಡಿ ತಮ್ಮ ರಹಸ್ಯಗಳನ್ನು ಹೇಳುತ್ತಿದ್ದರೆ, ಏನೇ ಮಾಡಿದರೂ ತೂಕ ಇಳಿಯದ ಹಠಮಾರಿ ದೇಹ ಕೆಲವರದ್ದು. ನಾನ್ಯಾಕೆ ಏನು ಮಾಡಿದರೂ ತೂಕ ಇಳಿಸಲು ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆ ನಿಮ್ಮಲ್ಲೂ ಕೆಲವರನ್ನು ಕಾಡಿರಬಹುದು. ಯಾಕೆಂದರೆ, ತೂಕ ಇಳಿಸುವುದು ಸುಲಭದ ಕೆಲಸವಲ್ಲ. ಅದಕ್ಕೊಂದು ಶ್ರದ್ಧೆ, ಶಿಸ್ತು ಬೇಕು. ಇವಿಷ್ಟಿದ್ದರೂ, ಅನೇಕರಿಗೆ ತೂಕ ಇಳಿಯದು. ದೇಹದ ಒಂದಿಂಚೂ ಕದಲದು. ಹೀಗಿರುವಾಗ ಯಾಕಿದು ಎಂಬ ಪ್ರಶ್ನೆ ಅವರನ್ನು ಕಾಡುವುದು ಸಹಜವೇ. ಬನ್ನಿ, ಏನೇ ಸರ್ಕಸ್ಸು ಮಾಡಿದರೂ ತೂಕ ಇಳಿಯದೆ ಇರುವ ಮಂದಿ ನೀವಾಗಿದ್ದರೆ, ನಿಮ್ಮ ತೂಕ ಇಳಿಕೆ ಆಗದೆ ಎರುವುದಕ್ಕೆ ಇದೂ ಒಂದು ಕಾರಣವಿರಬಹುದು (Weight Lose) ಎಂಬುದನ್ನು ನೆನಪಿಡಿ.
ಜೀರ್ಣವ್ಯವಸ್ಥೆಯ ಮೇಲೆ ಗಮನ ಕೊಡಿ. ನೀವೆಷ್ಟೇ ಪ್ರಯತ್ನಪಟ್ಟರೂ ತೂಕ ಇಳಿಯುತ್ತಿಲ್ಲ ಎಂದರೆ, ಇದೂ ಒಂದು ಕಾರಣವಾಗಬಹುದು. ನಮ್ಮ ದೇಹವು ಬೆವರು, ಮೂತ್ರ ಹಾಗೂ ಮಲದ ಮೂಲಕ ದೇಹದಲ್ಲಿ ಬೇಡವಾದ ಕಶ್ಮಲಗಳನ್ನು ಹೊರಕ್ಕೆ ಕಳುಹಿಸುತ್ತದೆ. ನಿತ್ಯವೂ ಇವೆಲ್ಲ ಸರಿಯಾಗಿ ಆಗುತ್ತಿದ್ದರೆ ಆರೋಗ್ಯ ಸರಿಯಾಗಿರುತ್ತದೆ. ಆದರೆ ದೇಹದಲ್ಲಿ ಜೀರ್ಣಾಂಗ ವ್ಯವಸ್ಥೆ ಅಥವಾ, ಕರುಳು ಬ್ಲಾಕ್ ಆಗಿದ್ದರೆ, ಈ ಕಶ್ಮಲಗಳೆಲ್ಲ ದೇಹದೊಳಗೇ ಅಲ್ಲಲ್ಲಿ ಉಳಿದುಬಿಟ್ಟು ದೇಹದ ಇಡಿಯ ವ್ಯವಸ್ಥೆಯ ಮೇಲೆಯೇ ಪರಿಣಾಮ ಬೀರುತ್ತದೆ. ಇದರಿಂದ ತೂಕ ಇಳಿಕೆಯ ಮೇಲೂ ಅಡ್ಡ ಪರಿಣಾಮ ಬೀರುತ್ತದೆ. ನೀವು ಅಂದುಕೊಂಡ ಹಾಗೆ ತೂಕ ಇಳಿಸಲು ಸಾಧ್ಯವಾಗುವುದಿಲ್ಲ.
ಡಯಟ್ ಮುಖ್ಯ
ಯಾವಾಗಲೂ, ವ್ಯಾಯಾಮಕ್ಕಿಂತಲೂ ತೂಕ ಇಳಿಕೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುವುದು ಡಯಟ್. ನೀವೇನು ತಿನ್ನುತ್ತೀರಿ ಎಂಬುದು ಅತ್ಯಂತ ಹೆಚ್ಚು ಮುಖ್ಯವಾಗುತ್ತದೆ. ತೂಕ ಇಳಿಸಲು ನಿಮ್ಮ ಡಯಟ್ ಶೇ.80ರಷ್ಟು ಪಾತ್ರ ವಹಿಸಿದರೆ, ವ್ಯಾಯಾಮದ ಪಾತ್ರ ಶೇ.20 ಮಾತ್ರ. ಹಾಗಾಗಿ, ನಿಮ್ಮ ದೇಹ ಯಾವ ಬಗೆಯದ್ದು ಎಂಬುದರ ಮೇಲೆ ನಿಮ್ಮ ಎಲ್ಲವೂ ಅವಲಂಬಿತವಾಗಿರಲಿ. ಆಯುರ್ವೇದದ ಪ್ರಕಾರ, ವಾತ, ಪಿತ್ತ ಹಾಗೂ ಕಫ ಪ್ರಕೃತಿಯೆಂಬ ತ್ರಿದೋಷದ ಆಧಾರದಲ್ಲಿ ನಿಮ್ಮ ದೇಹ ಯಾವ ಪ್ರಕೃತಿಯದ್ದು ಎಂಬುದು ನಿಮಗೆ ಗೊತ್ತಿರಲಿ. ಅದಕ್ಕೆ ಸೂಕ್ತವಾದ ಆಹಾರಕ್ರಮವಿರಲಿ. ಅಷ್ಟೇ ಅಲ್ಲ, ಸಿಹಿ, ಕುರುಕಲು ತಿನಿಸು, ಹೆಚ್ಚು ಉಪ್ಪಿನ ಪ್ಯಾಕೇಜ್ಡ್ ಆಹಾರಗಳಿಂದ ದೂರವಿರಿ.
ಪೋಷಕಾಂಶಗಳ ಕೊರತೆ
ಪೋಷಕಾಂಶಗಳ ಕೊರತೆಯಾಗಿರಬಹುದು. ಹೌದು. ಪೋಷಕಾಂಶಗಳ ವಿಚಾರದಲ್ಲಿ ನಿಮ್ಮ ದೇಹ ಯಾವುದೇ ಕೊರತೆಯನ್ನು ಅನುಭವಿಸುತ್ತಿದ್ದರೂ ಕೂಡಾ ಅದು ನಿಮ್ಮ ತೂಕ ಇಳಿಕೆಯ ವಿಚಾರದಲ್ಲಿ ಪರಿಣಾಮ ಬೀರುತ್ತದೆ. ವಿಟಮಿನ್, ಖನಿಜಾಂಶಗಳು ಅಥವಾ ಯಾವುದೇ ಬಗೆಯ ಪೋಷಕಾಂಶದಲ್ಲಿ ಕೊರತೆ ಇದ್ದರೂ ದೇಹ ಅದನ್ನು ಆ ಜಾಗಕ್ಕೆ ಪಡೆಯಲು ರಕ್ಷಣಾತ್ಮಕವಾಗಿ ಕೆಲಸ ಮಾಡಲು ಆರಂಭಿಸುತ್ತದೆ. ಹಾಗಾಗಿ ಮೊದಲು, ಯಾವುದರ ಕೊರತೆಯಿದೆಯೋ ಅದರ ಮೇಲೆ ಗಮನ ಹರಿಸಿ. ನಂತರ ತೂಕ ಇಳಿಸುವ ಕ್ರಮಗಳನ್ನು ಶಿಸ್ತಾಗಿ ಪಾಲಿಸಿ.