ಬೆಂಗಳೂರು: ನನ್ನ ಕ್ಷೇತ್ರದಲ್ಲಿ ಹೆಚ್ಚಿನ ದರಕ್ಕೆ ಟ್ಯಾಂಕರ್ ನೀರಿನ ದರ ಮಾರುವಂತಿಲ್ಲ. ಒಂದು ವೇಳೆ ಮಾರಾಟ ಮಾಡಿದರೆ ಮಾಲೀಕರನ್ನ ಸೀಜ್ ಮಾಡುವ ಕೆಲಸ ಆಗುತ್ತೆ ಎಂದು ಶಾಸಕ ಎಸ್.ಟಿ ಸೋಮಶೇಖರ್ ಎಚ್ಚರಿಕೆ ನೀಡಿದ್ದಾರೆ. ‘ಬಾಗಿಲಿಗೆ ಬಂತು ಸರ್ಕಾರ-ಸೇವೆಗೆ ಇರಲಿ ಸಹಕಾರ’ ಧ್ಯೇಯ ವಾಕ್ಯದಡಿ ಇಂದು ಆರ್.ಆರ್.ನಗರ, ಯಶವಂತಪುರ ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, 800 ರೂ. ಕ್ಕಿಂತ ಜಾಸ್ತಿ ಬೆಲೆಗೆ ಟ್ಯಾಂಕರ್ ನೀರು ಮಾರಾಟ ಮಾಡುವಂತಿಲ್ಲ ಎಂದು ಹೇಳಿದ್ದಾರೆ.
6 ಟಿಎಂಸಿ ಕಾವೇರಿ ನೀರು ಬೆಂಗಳೂರಿಗೆ ಮೀಸಲು: ಡಿಸಿಎಂ ಡಿಕೆ ಶಿವಕುಮಾರ್
ಬೆಂಗಳೂರಿಗೆ ನೀರಿನ ವಿಚಾರವಾಗಿ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ಮೇ ತಿಂಗಳೊಳಗೆ ಕುಡಿವ ನೀರಿನ ಸಮಸ್ಯೆ ಬಗೆಹರಿಸುತ್ತೇವೆ. 6 ಟಿಎಂಸಿ ಕಾವೇರಿ ನೀರು ಬೆಂಗಳೂರಿಗೆ ಮೀಸಲಿಟ್ಟಿದ್ದೇನೆ ಎಂದು ಎಂದು ಹೇಳಿದ್ದಾರೆ.
ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ ಬಳಿಯ ಸಿದ್ಧಾರ್ಥ ನಗರದಲ್ಲಿ ಕೇಳುವವರೆ ಇಲ್ಲ. ಸಿದ್ಧಾರ್ಥ ನಗರದಲ್ಲಿ ಜೀವಜಲಕ್ಕೆ ಹಾಹಾಕಾರ ನಡೆದಿದ್ದು, ಪ್ರತಿದಿನ ನೀರಿಗಾಗಿ ಸ್ಥಳೀಯ ನಿವಾಸಿಗಳು ಪರದಾಡುವಂತಾಗಿದೆ. ಸಿದ್ಧಾರ್ಥ ನಗರದಲ್ಲಿ ನಲ್ಲಿಗಳನ್ನು ಅಳವಡಿಸಲಾಗಿದೆ. ಆದರೆ ಜಲಮಂಡಳಿ ನೀರು ಕೊಡೋದನ್ನ ಮರೆತಂತಿದೆ.
ವರ್ಷಗಳು ಕಳೆದರೂ ನೀರು ಬಂದಿಲ್ಲ. ವಾರಕ್ಕೆ ಒಂದು ಬಾರಿ ಮಾತ್ರ ಕಾವೇರಿ ನೀರು ಬೀಡಲಾಗುತ್ತದೆ. ಹೆಸರಿಗೆ ಮಾತ್ರ ನಲ್ಲಿ ಅಳವಡಿಕೆ ಮಾಡಿದ್ದು, ಮೋಟಾರ್ ಹಾಕಿ ಎಳೆದರೂ ಹನಿ ನೀರು ಬರಲ್ಲ. ನೀರಿಗಾಗಿ ಸಾರ್ವಜನಿಕರೆ ಬೋರ್ವೆಲ್ ಕೊರೆಸಿದ್ದಾರೆ. ಬೇಸಿಗೆ ಆರಂಭದಲ್ಲೆ ಬೋರ್ವೆಲ್ ಬತ್ತಿ ಹೋಗುವ ಭೀತಿ ಎದುರಾಗಿದೆ.
ಇನ್ನೊಂದೆಡೆ 6 ತಿಂಗಳ ಹಿಂದೆ ಶುದ್ದ ಕುಡಿಯುವ ನೀರಿನ ಘಟಕ ಬಂದ್ ಬಿದ್ದಿದೆ. ಟ್ಯಾಂಕರ್ ನೀರು ಪಡೆಯಬೇಕು ಅಂದರು ದುಬಾರಿ ಬೆಲೆ ತೆರಬೇಕು. ಸ್ಥಳೀಯ ನಿವಾಸಿಗಳ ಪಾಲಿಗೆ ಪಾಲಿಕೆ, ಜಲಮಂಡಳಿ ಹಾಗೂ ಜನಪ್ರತಿನಿಧಿಗಳು ಇದ್ದೂ ಇಲ್ಲದಂತಾಗಿದೆ. ನೀರು ಪೂರೈಕೆಗೆ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.