ಮುಂಬೈ: 16ನೇ ಆವೃತ್ತಿಯ ಐಪಿಎಲ್ ಟೂರ್ನಿ ಬಳಿಕ ನಿವೃತ್ತಿ (Dhoni Retirement) ಸುಳಿವು ನೀಡಿದ್ದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ನಾಯಕ ಎಂ.ಎಸ್ ಧೋನಿ 2024ರ ಐಪಿಎಲ್ನಲ್ಲಿ ಪಾಲ್ಗೊಳ್ಳುವ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ಪ್ರಸಕ್ತ ವರ್ಷದ ಐಪಿಎಲ್ನಲ್ಲಿ ಸಿಎಸ್ಕೆ ಚಾಂಪಿಯನ್ ಆಗಿ ಹೊರಹೊಮ್ಮಿತು. ಐಪಿಎಲ್ ಬಳಿಕ ಧೋನಿ ಮೊಣಕಾಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿರುವ ಧೋನಿ, 2024ರ ಐಪಿಎಲ್ ಕುರಿತು ಮಾತನಾಡಿದ್ದಾರೆ. ಮಿನಿ ಹರಾಜಿಗೂ ಮುನ್ನ ಆಟಗಾರರ ಪಟ್ಟಿ ಸಲ್ಲಿಸುವಂತೆ ನವೆಂಬರ್ 15ರ ವರೆಗೆ ಗಡುವು ನೀಡಲಾಗಿದೆ. ಈ ನಡುವೆ ಮತ್ತೊಮ್ಮೆ ಧೋನಿ ತಮ್ಮ ನಿವೃತ್ತಿ ಬಗ್ಗೆ ಸುಳಿವು ಕೊಟ್ಟಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಮಹಿ, ನನಗೆ ಮೊಣಕಾಲಿನ ಶಸ್ತ್ರಚಿಕಿತ್ಸೆಯಾಗಿದೆ (Knee Surgery). ಎಲ್ಲವೂ ಅಂದುಕೊಂಡಂತೆ ನಡೆದರೆ, ನಾನು ಒಂದು ವರ್ಷ ಐಪಿಎಲ್ ಆಡುವುದನ್ನು ನೋಡುತ್ತೀರಿ. ಇಲ್ಲದಿದ್ದರೆ ಅಭಿಮಾನಿಗಳೊಂದಿಗೆ ಕುಳಿತು ಪಂದ್ಯವನ್ನು ವೀಕ್ಷಣೆ ಮಾಡುತ್ತೇನೆ ಎಂದು ಮುಗುಳ್ನಕ್ಕಿದ್ದಾರೆ. ಧೋನಿ ಟೀಂ ಇಂಡಿಯಾ (Team India) ಬಳಿಕ ಅತೀ ಹೆಚ್ಚು ಭಾವನಾತ್ಮಕವಾಗಿ ಸಂಬಂಧ ಹೊಂದಿರುವ ತಂಡವೆಂದರೆ ಅದು ಚೆನ್ನೈ ಸೂಪರ್ ಕಿಂಗ್ಸ್ ತಂಡ.
ಐಪಿಎಲ್ 2008ರಲ್ಲಿ ಆರಂಭವಾದ ಬಳಿಕ ಚೆನ್ನೈ ಪರ ಆಡುತ್ತಿರುವ ಧೋನಿ ವಿಶೇಷವಾದ ಸಂಬಂಧ ಚೆನ್ನೈ ತಂಡ ಮತ್ತು ತಮಿಳುನಾಡಿನ ಜನರೊಂದಿಗೆ ಹೊಂದಿದ್ದಾರೆ. 16ನೇ ಐಪಿಎಲ್ ಆವೃತ್ತಿಯಲ್ಲೇ ಮಹಿ ನಿವೃತ್ತಿ ಘೋಷಣೆ ಮಾಡುವ ಎಲ್ಲ ಸುಳಿವು ನೀಡಿದ್ದರು. 5ನೇ ಬಾರಿ ಟ್ರೋಫಿ ಗೆದ್ದ ಬಳಿಕ ಮಹಿ 2024ರ ಐಪಿಎಲ್ನಲ್ಲೂ ಆಡುವುದಾಗಿ ಘೋಷಣೆ ಮಾಡಿದರು. ಧೋನಿ ನಾಯಕತ್ವದಲ್ಲಿ ಚೆನ್ನೈ ತಂಡ 2010, 2011, 2018, 2021 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. 2023ರ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದ ಗುಜರಾತ್ ಟೈಟಾನ್ಸ್ ತಂಡವನ್ನು ಬಗ್ಗು ಬಡಿದು ಚೆನ್ಮೈ 5ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು. ಅಲ್ಲದೇ 2008, 2012, 2013, 2015, 2019ರಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದೆ.