ಗಯಾನಾ (ವೆಸ್ಟ್ ಇಂಡೀಸ್): ಟೀಮ್ ಇಂಡಿಯಾ ವಿರುದ್ಧದ ಟಿ20 ಸರಣಿಯ 3ನೇ ಪಂದ್ಯದಲ್ಲಿ ಎದುರಾದ 7 ವಿಕೆಟ್ಗಳ ಹೀನಾಯ ಸೋಲಿನ ಬಳಿಕ ಮಾತನಾಡಿದ ವೆಸ್ಟ್ ಇಂಡೀಸ್ ನಾಯ ರೋವ್ಮನ್ ಪೊವೆಲ್, ತಂಡ ತನ್ನ ರಣತಂತ್ರ ಬದಲಾಯಿಸಿಕೊಳ್ಳುವ ಅಗತ್ಯವಿದೆ ಎಂದಿದ್ದಾರೆ. ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಕ್ರಮವಾಗಿ 4 ರನ್ ಮತ್ತು 2 ವಿಕೆಟ್ಗಳ ಜಯ ದಾಖಲಿಸಿತ್ತು. ಮೂರನೇ ಪಂದ್ಯ ಗೆದ್ದು ಸರಣಿ ವಶ ಪಡಿಸಿಕೊಳ್ಳುವ ಲೆಕ್ಕಾಚಾರ ಮಾಡಿತ್ತಾದರೂ, ಟೀಮ್ ಇಂಡಿಯಾದ ಅಧಿಕಾರಯುತ ಪ್ರದರ್ಶನದ ಎದುರು ತಬ್ಬಿಬ್ಬಾಯಿತು.
ಇಲ್ಲಿನ ಪ್ರಾವಿಡೆಂಟ್ ಕ್ರೀಡಾಂಗಣದಲ್ಲಿ ಮಂಗಳವಾರ (ಆಗಸ್ಟ್ 8) ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡೀಸ್, ಓಪನರ್ ಬ್ರ್ಯಾಂಡನ್ ಕಿಂಗ್ (42) ಮತ್ತು ನಾಯಕ ಪೊವೆಲ್ (40*) ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಲ್ಲಿ 159/5 ರನ್ಗಳ ಸವಾಲಿನ ಮೊತ್ತ ದಾಖಲಿಸಿತು. ಗುರಿ ಬೆನ್ನತ್ತಿದ ಭಾರತ 34ಕ್ಕೆ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ಆದರೆ, 3ನೇ ವಿಕೆಟ್ಗೆ ಸೂರ್ಯಕುಮಾರ್ ಯಾದವ್ (83) ಮತ್ತು ತಿಲಕ್ ವರ್ಮಾ (49*) 87 ರನ್ಗಳ ಜೊತೆಯಾಟವಾಡಿ ಭಾರತಕ್ಕೆ 7 ವಿಕೆಟ್ಗಳ ಜಯ ತಂದರು.
ಈ ಹೀನಾಯ ಸೋಲಿನ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ರೋವ್ಮನ್ ಪೊವೆಲ್, ತಂಡ ಮೊದಲ ಬ್ಯಾಟ್ ಮಾಡಿ 10-15 ರನ್ ಕಡಿಮೆ ಸ್ಕೋರ್ ಮಾಡಿದ್ದೇ ಸೋಲಿಗೆ ಬಹುಮುಖ್ಯ ಕಾರಣವಾಯಿತು ಎಂದರು.
“ಈ ಪಿಚ್ನಲ್ಲಿ ನಾವು 10-15ರನ್ ಕೊರತೆ ಅನುಭವಿಸಿದೆವು. ಆದರೆ, ನಮ್ಮ ಬ್ಯಾಟಿಂಗ್ ವಿಭಾಗದ ಪ್ರದರ್ಶನ ಮೆಚ್ಚಬೇಕು. ಪ್ರಮುಖವಾಗಿ ಆರಂಭಿಕ ಬ್ಯಾಟರ್ಗಳು ಉತ್ತಮವಾಗಿ ಆಡಿದರು. ನಾವು ಬಯಸುವ ಆರಂಭ ಇಂಥದ್ದೇ. ಇದರಿಂದ ನಿಕೋಲಸ್ ಪೂರನ್ ಅವರನ್ನು 3ನೇ ಕ್ರಮಾಂಕದಲ್ಲಿ ಕಳಿಸುವ ಅವಕಾಶ ಸಿಕ್ಕಿತ್ತು. ಆದರೂ ಜಾನ್ಸನ್ ಚಾರ್ಲ್ಸ್ಗೆ ಒಂದು ಅವಕಾಶ ಕೊಟ್ಟೆವು. ಪೂರನ್ ಯಾವ ಲಯದಲ್ಲಿದ್ದಾರೆ. ಯಾವ ಆಟವಾಡಬಲ್ಲರು ಎಂಬುದರ ಸಂಪೂರ್ಣ ಅರಿವು ನಮಗಿದೆ,” ಎಂದು ಪೊವೆಲ್ ಹೇಳಿದ್ದಾರೆ.