ಮುಂಬೈ: ಸೇತುವೆ (Bridge) ಮೇಲಿನಿಂದ ಉರುಳಿದ ಕಾರು (Car) ಚಲಿಸುತ್ತಿದ್ದ ರೈಲಿನ (Train) ಮೇಲೆ ಬಿದ್ದ ಪರಿಣಾಮ ಸ್ಥಳೀಯ ಆರ್ಪಿಐ ಕಾರ್ಯಕರ್ತ (RPI Activist) ಸೇರಿದಂತೆ ಮೂವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ (Maharashtra) ನಡೆದಿದೆ. ಮೃತರನ್ನು ಧರ್ಮಾನಂದ ಗಾಯಕ್ವಾಡ್ (41) ಮತ್ತು ಅವರ ಸಂಬಂಧಿಕರಾದ ಮಂಗೇಶ್ ಜಾಧವ್ (46) ಮತ್ತು ನಿತೀನ್ ಜಾಧವ್ (48) ಎಂದು ಗುರುತಿಸಲಾಗಿದೆ.
ಗಾಯಕ್ವಾಡ್ ಅವರು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಳೆ ಗುಂಪು) ಕಾರ್ಯಕರ್ತರಾಗಿದ್ದರು ಎಂದು ತಿಳಿದುಬಂದಿದೆ. ಮಂಗಳವಾರ ಮುಂಜಾನೆ 3:30 ರಿಂದ 4 ಗಂಟೆಯ ವೇಳೆಗೆ ಕಿನವಲಿ ಬಳಿಯ ಸೇತುವೆಯ ಮೇಲೆ ಕಾರು ಮುಂಬೈ-ಪನ್ವೇಲ್ ರಸ್ತೆಯಲ್ಲಿ ನೇರಲ್ ಕಡೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಪನ್ವೇಲ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸರಕು ಸಾಗಣೆ ರೈಲು ರಾಯಗಢ ಜಿಲ್ಲೆಯ ಪನ್ವೇಲ್ನಿಂದ ಕರ್ಜತ್ಗೆ ತೆರಳುತ್ತಿತ್ತು. ಘಟನೆಯಿಂದಾಗಿ ಅದರ ಕೆಲವು ವ್ಯಾಗನ್ಗಳು ಬೇರ್ಪಟ್ಟಿವೆ ಎಂದು ಕೇಂದ್ರ ರೈಲ್ವೆಯ (ಸಿಆರ್) ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಶಿವರಾಜ್ ಮನಸ್ಪುರೆ ತಿಳಿಸಿದ್ದಾರೆ. ಅಪಘಾತದ ಕಾರಣ ಸಿಆರ್ನ ಪನ್ವೇಲ್-ಕರ್ಜತ್ ವಿಭಾಗವನ್ನು ಮುಂಜಾನೆ 3:43 ರಿಂದ 7:32 ರವರೆಗೆ ಮುಚ್ಚಲಾಗಿದೆ ಎಂದು ಅವರು ಹೇಳಿದರು.