v
ಕೊಪ್ಪಳ: ಅದೆಷ್ಟೋ ಜನರಿಗೆ ಮಕ್ಕಳು ಬೇಕು ಎಂದು ಹಾಸ್ಪಿಟಲ್ಗೆ, ದೇವಸ್ಥಾನಗಳಿಗೆ ಹೋಗಿ ಮಕ್ಕಳಿಗಾಗಿ ಪ್ರಾರ್ಥನೆ ಮಾಡುವ ಜನರು ಒಂದು ಕಡೆಯಾದರೆ ಮತ್ತೊಂದು ಕಡೆ ಹುಟ್ಟಿದ ಮಗುವನ್ನು ರಸ್ತೆ ಬದಿಯಲ್ಲಿ ಇಟ್ಟು ನಮಗೆ ಸಂಬಂಧವಿಲ್ಲ ಎನ್ನುವ ಜನರು ಕೂಡ ಇದ್ದಾರೆ. ಅದೇ ರೀತಿ ಹೆಣ್ಣು ಮಗು ಎಂಬ ಕಾರಣಕ್ಕೆ ಆಗ ತಾನೇ ಹುಟ್ಟಿದ್ದ ಮಗುವನ್ನು ಎಸೆದು ಹೋಗಿದ್ದ ಘಟನೆ ತಾಲೂಕಿನ ಪ್ರಗತಿ ನಗರದಲ್ಲಿ ನಡೆದಿತ್ತು.
ಬಳಿಕ ಮಗುವನ್ನು ಮಹಿಳೆಯರು ರಕ್ಷಣೆ ಮಾಡಿದ್ದರು. ಇದೀಗ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ ಸುರಕ್ಷಿತವಾಗಿದೆ. ಮಗುವಿಗೆ ಕೊಪ್ಪಳದ ಜಿಲ್ಲಾ ಆಸ್ಪತ್ರೆಯ ನವಜಾತ ಶಿಶುಗಳ ವಿಭಾಗದಲ್ಲಿ ಆರೈಕೆ ಮಾಡಲಾಗಿದೆ. ವೆಂಟಿಲೇಟರ್ ಮೂಲಕ ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಿ ಚಿಕಿತ್ಸೆ ನೀಡಲಾಗಿದೆ. ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದೆ. ಮಗು 2.5 ಕೆ.ಜಿ ತೂಕವಿದ್ದು ಆರೋಗ್ಯದ ಸ್ಥಿತಿ ಉತ್ತಮವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪಾಲಕರ ಪತ್ತೆಗೆ ಈಗಾಗಲೇ ಪೊಲೀಸ್ ಇಲಾಖೆ ಮತ್ತು ಮಾಧ್ಯಮಗಳ ಗಮನಕ್ಕೆ ತರಲಾಗಿದೆ. ಜನರ ನೆರವು ಕೋರಲಾಗಿದೆ.
ಪಾಲಕರು ಸಿಕ್ಕಲ್ಲಿ ಸೂಕ್ತ ದಾಖಲೆ, ಪುರಾವೆಗಳೊಂದಿಗೆ ಬಂದರೆ ಮಗುವನ್ನು ನೀಡಲಾಗುವುದು. ಎಸೆದು ಹೋಗಲು ಕಾರಣ ಕೇಳಿ ಸೂಕ್ತ ಕ್ರಮ ಕೈಗೊಂಡು ಮಗುವನ್ನು ಷರತ್ತುಗಳ ಮೇಲೆ ಹಸ್ತಾಂತರ ಮಾಡಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಕಳೆದ ಜೂನ್ 11ರಂದು ಗಂಗಾವತಿ ತಾಲ್ಲೂಕಿನ ಪ್ರಗತಿ ನಗರದ ಹೊರವಲಯದಲ್ಲಿ ಮಹಿಳೆಯರು ಬಹಿರ್ದೆಸೆಗೆ ಹೋಗುವ ಸ್ಥಳದಲ್ಲಿ ಮಗುವನ್ನು ಎಸೆದು ಹೋಗಲಾಗಿತ್ತು. ಬೆಳಗಿನ ಜಾವ ಮಗು ಅಳುತ್ತಿರುವ ಧ್ವನಿ ಕೇಳಿದ ಸ್ಥಳೀಯ ಮಹಿಳೆಯರು ರಕ್ಷಣೆ ಮಾಡಿದ್ದರು.