ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದ ಮೇಲೆ ಬಂಧಿತರಾಗಿರುವ ಮೂವರು ಆರೋಪಿಗಳನ್ನು ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಲಾಗಿದೆ.
ಇಂದು ಸಂಜೆ ಅಶೋಕನಗರ ಪೊಲೀಸರು ದೆಹಲಿ ಮೂಲದ ಇಲ್ತಾಜ್, ಆರ್ ಟಿ ನಗರದ ಮುನಾವರ್ ಹಾಗೂ ಬ್ಯಾಡಗಿಯ ಮೊಹಮದ್ ಶಫಿ ನಾಶಿಪುಡಿ ಬಂಧಿಸಿದ್ದರು. ಬಳಿಕ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಬಳಿಕ ಪೊಲೀಸರು ಕೋರಮಂಗಲದ 39ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು.
ಈ ನಡುವೆ ಪೊಲೀಸರು ಘೋಷಣೆ ಕೂಗಿರುವುದಕ್ಕೆ ಸಂಬಂಧಪಟ್ಟ ವೀಡಿಯೋಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಿದ್ದರು. ಇದೀಗ FSL ವರದಿಯಲ್ಲಿ ಪಾಕ್ ಪರ ಘೋಷಣೆ ಕೂಗಿರುವುದು ದೃಢಪಟ್ಟ ನಂತರ ಮೂವರ ಬಂಧನ ಮಾಡಲಾಗಿದೆ.
ಈ ಸಂಬಂಧ ಸೆಂಟ್ರಲ್ ಡಿಸಿಪಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ವಿಧಾನಸೌಧದಲ್ಲಿ ನಡೆದ ರಾಜ್ಯಸಭಾ ಚುನಾವಣೆಯ ಫಲಿತಾಂಶದ ಸಂದರ್ಭದಲ್ಲಿʼಪಾಕಿಸ್ತಾನ ಜಿಂದಾಬಾದ್ʼ ಎಂಬ ಘೋಷಣೆ ಕೂಗಿದ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ FSL ವರದಿ, ಸಾಂದರ್ಭಿಕ ಸಾಕ್ಷ್ಯಾಧಾರಗಳು, ಸಾಕ್ಷಿಗಳ ಹೇಳಿಕೆ ಮತ್ತು ಲಭ್ಯ ಸಾಕ್ಷಾಧಾರಗಳ ಮೇರೆಗೆ ಮೂವರನ್ನು ಬಂಧಿಸಿದ್ದು, ಇವರ ವಿರುದ್ಧ ಕಾನೂನು ಕ್ರಮ ಜರಗಿಸಲಾಗಿರುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.