ಕೊಲಂಬೊ: ದೀವಾಳಿಯ ಅಂಚಿನಲ್ಲಿರುವ ಶ್ರೀಲಂಕಾ ಅದರಿಂದ ಹೊರ ಬರಲು ನಾನಾ ಕಸರತ್ತುಗಳನ್ನು ಮಾಡಿತ್ತದೆ. ಇದೀಗ ಚೀನಾದಲ್ಲಿ ಅಳಿವಿನಂಚಿನಲ್ಲಿರುವ ಒಂದು ಲಕ್ಷ ಮಂಗಗಳನ್ನು ರವಾನಿಸಲು ಮುಂದಾಗಿದ್ದು ಈ ಮೂಲಕ ಚೀನಾದಿಂದ ಕೊಂಚ ಮಟ್ಟಿನ ಸಹಾಯಕ್ಕೆ ಶ್ರೀಲಂಕಾ ಯಾಚಿಸಿದೆ.
ಅಂತಾರಾಷ್ಟ್ರೀಯ ನಿಸರ್ಗ ಸಂರಕ್ಷಣಾ ಒಕ್ಕೂಟ (ಐಯುಸಿಎನ್) ಅಪಾಯದಂಚಿನಲ್ಲಿದೆ ಎಂದು ಗುರುತಿಸಿರುವ ‘ಟೋಕ್ ಮಕಾಕ್’ ಹೆಸರಿನ ಮಂಗಗಳನ್ನು ಲಂಕಾದಿಂದ ಖರೀದಿಸಲು ಚೀನಾ ಬಯಸಿದೆ.
ಲಂಕಾದಿಂದ ತರಿಸಿಕೊಳ್ಳುವ ಮಂಗಗಳನ್ನು ತನ್ನ ದೇಶದ ಒಂದು ಸಾವಿರ ಮೃಗಾಲಯಗಳಲ್ಲಿ ಇರಿಸುವುದಾಗಿ ಚೀನಾ ಹೇಳಿದೆ. ಮಂಗಗಳ ಮಾರಾಟವನ್ನು ಸಾಲದ ತಿರುವಳಿಗೆ ಬಳಸಬಹುದು ಎಂದು ಆಲೋಚಿಸಿರುವ ಲಂಕಾ, ಚೀನಾದ ಬೇಡಿಕೆ ಬಗ್ಗೆ ಅಧ್ಯಯನ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
ಮಂಗಗಳ ರವಾನೆ ಬಗ್ಗೆ ಕೃಷಿ ಸಚಿವ ಮಹಿಂದಾ ಅಮರವೀರ ನೇತೃತ್ವದಲ್ಲಿ ಮಂಗಳವಾರ ವಿಶೇಷ ಸಭೆ ನಡೆದಿದ್ದು, ಕೃಷಿ ಸಚಿವಾಲಯ, ರಾಷ್ಟ್ರೀಯ ಪ್ರಾಣಿಶಾಸ್ತ್ರ ಇಲಾಖೆ, ವನ್ಯಜೀವಿ ಸಂಕರಕ್ಷಣಾ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
ಲಂಕಾದಲ್ಲಿ 30 ಲಕ್ಷ ಮಂಗಗಳು: ‘ಟೋಕ್ ಮಕಾಕ್’ ಮಂಗಗಳ ಸಂಖ್ಯೆ 30 ಲಕ್ಷ ಇದ್ದು, ಇವು ರೈತರ ಬೆಳೆಗಳನ್ನು ಹಾಳು ಮಾಡುತ್ತಿವೆ. ಇವುಗಳನ್ನು ಚೀನಾಕ್ಕೆ ರವಾನಿಸುವುದರಿಂದ ಮಂಗಗಳ ಉಪಟಳಕ್ಕೂ ಕಡಿವಾಣ ಹಾಕಬಹುದು ಎಂಬ ಅಂಶ ಸಭೆಯಲ್ಲಿ ವ್ಯಕ್ತವಾಗಿದೆ.