ಚಿತ್ರದುರ್ಗ: ಕಾಂಗ್ರೆಸ್ ಪಕ್ಷ ಸಿದ್ಧಾಂತ ಬಿಟ್ಟು ಮದ್ದೂರು, ಚಿತ್ರದುರ್ಗದಲ್ಲಿ ಕ್ಯಾಸಿನೊ, ಇಸ್ಟೀಟ್ ಆಡಿಸುವವರಿಗೆ ಟಿಕೆಟ್ ನೀಡಿದ್ದು, ಚಿತ್ರದುರ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೀರೆಂದ್ರ ಪಪ್ಪಿ ಠೇವಣಿ ಕಳೆದುಕೊಳ್ಳುತ್ತಾರೆ ಎಂದು ಜೆಡಿಎಸ್ ಅಭ್ಯರ್ಥಿ ಜಿ.ರಘು ಆಚಾರ್ ಹೇಳಿದ್ದಾರೆ.
ನಗರದಲ್ಲಿನ ತಮ್ಮ ನಿವಾಸದಲ್ಲಿ ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಉತ್ತಮ ವಿದ್ಯಾಭ್ಯಾಸ ಬೇಕಿದೆ. ಆದರೆ ನಗರದ ಮಲ್ಲಾಪುರ ಕೆರೆಯಲ್ಲಿ ಕ್ಯಾಸಿನೊ ಪ್ರಾರಂಭಿಸುತ್ತೆವೆ ಎಂದು ಹೇಳಲಾಗುತ್ತಿದ್ದು, 17ವರ್ಷದ ಯುವಕರು ಕ್ಯಾಸಿನೊಗೆ ಹೋದರೆ ಗತಿಯೇನು ? ಕ್ಷೇತ್ರದ ಮತದಾರರು ಇಸ್ಪೀಟ್ ಕ್ಲಬ್ ಬೇಕೋ, ಎಜುಕೇಶನ್ ಬೇಕೋ ಎಂಬುದನ್ನು ತೀರ್ಮಾನಿಸುತ್ತಾರೆ ಎಂದು ಚಿತ್ರದುರ್ಗ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ವಿರೇಂದ್ರ ಪಪ್ಪಿಗೆ ಟಾಂಗ್ ನೀಡಿದರು.
ನಿನ್ನೆ ದಿನ ಕಾರು ಅಡ್ಡಗಟ್ಟಿ ಗಲಾಟೆ ಪ್ರಕರಣ ಸಂಬಂಧ ಮಾತನಾಡಿದ ರಘು ಆಚಾರ್, ನಾಲ್ಕು ಜನ ಪುಂಡ ಹೈಕಳು ಕಟ್ಟಿಕೊಂಡು ಗಲಾಟೆ ಮಾಡಿದರೆ ನಾನು ಹೆದರುವವನು ಅಲ್ಲ. ನಾವು ಗಲಾಟೆ ಶುರು ಮಾಡಿದರೆ ನೀವು ಹಳ್ಳಿಗೆ ಹೋಗಲು ಸಾಧ್ಯವಾಗಲ್ಲ. ಗಲಾಟೆನೇ ಮಾಡ್ತೀವಿ ಅಂದರೆ ನಾನು ಗಲಾಟೆ ಮಾಡಿಸ್ತೀನೆಂದು ಸವಾಲು ಹಾಕಿದರು.
ಕಾಂಗ್ರೆಸ್ ಪಕ್ಷ ಅಹಿಂದ ಮುಗಿಸಲು ಹೊರಟಿದೆ. ಸಣ್ಣ ಸಮುದಾಯದ ನಾವು ಚುನಾವಣೆಗೆ ಸ್ಪರ್ಧಿಸಿದರೆ ಗಲಾಟೆ ಮಾಡುತ್ತಾರೆ. ಜಿಲ್ಲೆಯಲ್ಲಿ ಯಾವ ನಾಯಕರು ಹೀಗೆ ಗಲಾಟೆ ಮಾಡಿಸಿರಲಿಲ್ಲ. ಹೀಗೆ ಗಲಾಟೆ ಮಾಡಿಸಿದರೆ ಕೈ ಅಭ್ಯರ್ಥಿ ವಿರೇಂದ್ರ ಠೇವಣಿ ಕಳೆದುಕೊಳ್ಳುತ್ತಾರೆ. ನಗರದ ಚೆಳುಗುಡ್ಡದಲ್ಲಿ ಗಲಾಟೆ ಮಾಡಿದ ಸ್ಥಳದಿಂದಲೇ ನಾಳೆ ಪ್ರಚಾರ ಆರಂಭಿಸುವುದಾಗಿ ಹೇಳಿದ ಅವರು, ನನಗೆ ಬಿಜೆಪಿ ಅಭ್ಯರ್ಥಿ ಜಿ.ಹೆಚ್.ತಿಪ್ಪಾರೆಡ್ಡಿ ನಡುವೆ ಸ್ಪರ್ಧೆ ಇದ್ದು, 35ಸಾವಿರ ಅಂತರದಲ್ಲಿ ನಾನು ಗೆಲ್ಲುವ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಧರ್ಮ ಗುರು ಜಾಬೀರ್, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಶಿವಪ್ರಸಾದ್ ಹಾಜರಿದ್ದರು.