ತುಮಕೂರು: ಇಂದು ಕರ್ನಾಟಕ ವಿಧಾನಸಭೆ (Karnataka Assembly Election 2023) ಗೆ ಚುನಾವಣೆ ನಡೆಯುತ್ತಿದೆ. ನಾಡಿನಾದ್ಯಂತ ಎಲ್ಲರೂ ತಮ್ಮ ಹಕ್ಕು ಚಲಾಯಿಸುವ ದಿನವಾಗಿದೆ. ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನಕ್ಕೆ ಬಹಳಷ್ಟು ಮಹತ್ವ ಇದೆ. ನಮ್ಮದೇ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವಂತಹ ವ್ಯವಸ್ಥೆ. ನಮ್ಮ ಸಂವಿಧಾನ ಕೊಟ್ಟಿರುವ ಹಕ್ಕನ್ನು ಪ್ರತಿಯೊಬ್ಬರು ಕೂಡ ಚಲಾವಣೆ ಮಾಡಬೇಕು ಎಂದು ಸಿದ್ದಗಂಗಾ ಮಠ (Siddaganga Mutt) ದ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ಮತದಾನ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಮಿಷಗಳಾಗಿ ಒಳಗಾಗದೇ ನಮ್ಮ ಅಮೂಲ್ಯವಾದ ಮತ (Vote) ನೀಡಿ. ತಮ್ಮ ಒಂದು ಮತಕ್ಕೆ ಬೆಲೆ ಕಟ್ಟಲಾಗದು. ಹೀಗಾಗಿ ಯಾವುದೇ ರೀತಿಯ ಆಸೆ, ಆಮಿಷಗಳಿಗೆ ಒಳಗಾಗದೇ ಮತಚಲಾಯಿಸಬೇಕು. ಈ ಮೂಲಕ ಅದರ ಪಾವಿತ್ರ್ಯತೆಯನ್ನು ಉಳಿಸಿಕೊಳ್ಳಬೇಕು ಎಂದರು.
18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಅವರವರ ಮತಗಟ್ಟೆಗೆ ಹೋಗಿ ಮತದಾನ ಮಾಡಿ. ಈ ಸಂದರ್ಭದಲ್ಲಿ ಯಾರೂ ಮನೆಯಲ್ಲಿ ಉಳಿಯಬೇಡಿ ಎಲ್ಲರೂ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು. ನ್ಯಾಯ ಹಾಗೂ ಮುಕ್ತವಾದ ರೀತಿಯಲ್ಲಿ ಮತದಾನ ಮಾಡುವಂತದ್ದಾಗಿದೆ. ಅವರವರ ಇಚ್ಚೆಯಲ್ಲಿ ಅವರವರಿಗೆ ಇಷ್ಟವಾದ ಅಭ್ಯರ್ಥಿಗೆ ಮತ ನೀಡುವಂತದ್ದಾಗಿದೆ ಎಂದು ಹೇಳಿದರು.
ಭಾರತೀಯ ಪ್ರಜೆಗಳಾಗಿ ತಮ್ಮ ಹಕ್ಕು ಮತ್ತು ಕರ್ತವ್ಯವನ್ನು ಚಲಾವಣೆ ಮಾಡಬೇಕು. ಇವತ್ತು ನೂರಕ್ಕೆ ನೂರು ಮತದಾನ ಆಗುತ್ತಿರುವುದು ಬಹಳ ಅಪರೂಪ ಆಗಿದೆ. ಇದು ಪ್ರಜಾಪ್ರಭುತ್ವದ ಪೂರ್ಣ ಯಶಸ್ಸಿಗೆ ಕಾರಣವಾಗುತ್ತಿದೆ. ಜನ ಮತದಾನದಲ್ಲಿ ಭಾಗವಹಿಸುವಂತಹ ಮನೋಭಾವನೆ ಇಟ್ಟುಕೊಳ್ಳಬೇಕು. 18 ವರ್ಷ ಎಲ್ಲಾ ಯುವಕ- ಯುವತಿಯರು ಕೂಡ ಮತದಾನದಲ್ಲಿ ಭಾಗವಹಿಸುತ್ತಿದ್ದಾರೆ. ವಯಸ್ಸಾದವರಿಗೆ ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.