ಬೆಂಗಳೂರು: ಮುಡಾ ಬಿಕ್ಕಟ್ಟಿನ ನಡುವೆಯೇ ಜಾತಿ ಜನಗಣತಿ ವರದಿಯನ್ನು ಜಾರಿ ಮಾಡಲು ಒತ್ತಡ ಹೆಚ್ಚಾಗಿದ್ದು ಮತ್ತೆ ಕಾಂಗ್ರೆಸ್ನಲ್ಲಿ ಪರ-ವಿರೋಧಕ್ಕೆ ವೇದಿಕೆ ಸಜ್ಜಾಗಿದೆ.
ಸೋಮವಾರದಿಂದ ಜಾತಿ ಜನಗಣತಿ ಅಭಿಯಾನಕ್ಕೆ ಕಾಂಗ್ರೆಸ್ನ ಕೆಲ ಶಾಸಕರಿಂದಲೇ ಅಧಿಕೃತ ಚಾಲನೆ ಸಿಗುವ ಸಾಧ್ಯತೆಯಿದೆ.
ಜಾತಿ ಜನಗಣತಿಗೆ ಬೇರೆ ಸಮುದಾಯದ ಸ್ವಪಕ್ಷೀಯ ನಾಯಕರ ವಿರೋಧ ವ್ಯಕ್ತವಾದರೂ ಹೈಕಮಾಂಡ್ ಮಧ್ಯಸ್ಥಿಕೆ ಮೂಲಕ ಸಮಾಧಾನ ಪಡಿಸುವ ಲೆಕ್ಕಾಚಾರವನ್ನು ಸಿಎಂ ಹಾಕಿದ್ದಾರೆ. ಅಷ್ಟೇ ಅಲ್ಲದೇ ಡಿಸೆಂಬರ್ ಅಧಿವೇಶನದಲ್ಲಿ ಮಾಸ್ಟರ್ ಸ್ಟ್ರೋಕ್ ನೀಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಅಕ್ಟೋಬರ್ 10 ರಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯುವ ಸಾಧ್ಯತೆಯಿದ್ದು, ಈ ಸಭೆಯಲ್ಲಿ ಕಾಂತರಾಜು ವರದಿಬಗ್ಗೆ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ ಎನ್ನಲಾಗಿದೆ.
ಕಳೆದ ಫೆಬ್ರವರಿಯಲ್ಲಿ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಸರ್ಕಾರಕ್ಕೆ ಅಂತಿಮ ವರದಿಯನ್ನು ಸಲ್ಲಿಕೆ ಮಾಡಿದ್ದರು. ಆದರೆ ಈವರೆಗೂ ಸಂಪುಟದಲ್ಲಿ ವರದಿ ಕುರಿತು ಸರ್ಕಾರ ಚರ್ಚೆ ನಡೆಸಿರಲಿಲ್ಲ. ಈಗ ಮುಡಾ ಕಾನೂನು ಕಂಟಕ ವೇಳೆ ಜಾತಿ ಜನಗಣತಿ ವರದಿ ಮೇಲೆ ಸಿಎಂ ಕಣ್ಣಿಟ್ಟಿದ್ದಾರೆ.
ವರದಿ ಜಾರಿ ಕುರಿತು ಸಿಎಂ ಹೇಳಿಕೆ ಬಳಿಕ ಪಕ್ಷದೊಳಗೆ ಮತ್ತು ಹೊರಗೆ ಪರ ವಿರೋಧ ಚರ್ಚೆ ಆರಂಭವಾಗಿದೆ. ಅಹಿಂದ ವರ್ಗಗಳ ಕೈ ನಾಯಕರು ಆದಷ್ಟು ಬೇಗ ವರದಿ ಜಾತಿಗೆ ಒತ್ತಾಯಿಸುತ್ತಿದ್ದಾರೆ. ಆದರೆ ಸಿಎಂ ಮತ್ತು ಅಹಿಂದ ನಾಯಕರ ಆತುರಕ್ಕೆ ಮೇಲ್ವರ್ಗದ ನಾಯಕರ ಬೇಸರ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಂಪುಟ ಸಭೆಯಲ್ಲಿ ವರದಿ ಜಾರಿಯ ಬಗ್ಗೆ ಸಚಿವರ ಅಭಿಪ್ರಾಯವನ್ನು ಸಿಎಂ ಪಡೆಯಲಿದ್ದಾರೆ.
ಜಾತಿ ಜನಗಣತಿ ವರದಿ ಜಾರಿ ಸಂಬಂಧ ಸಿಎಂ ಸಂಪುಟ ಉಪಸಮಿತಿ ರಚನೆ ಮಾಡುವ ಸಾಧ್ಯತೆಯಿದೆ. ವರದಿ ಜಾರಿಯ ಸಾಧಕ ಬಾಧಕ ಬಗ್ಗೆ ಗಡುವಿನೊಳಗೆ ಸಂಪುಟ ಉಪಸಮಿತಿ ವರದಿ ಪಡೆಯಲು ಚಿಂತನೆ ನಡೆದಿದೆ ಎನ್ನಲಾಗುತ್ತಿದೆ.