ಬೆಂಗಳೂರು;- ಕಾವೇರಿ ನೀರಿನ ವಿಚಾರದಲ್ಲಿ ರಾಜಕೀಯ ಇಲ್ಲ ಎಂದು ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಕಾವೇರಿ ನೀರಿನ ವಿಚಾರದಲ್ಲಿ ತೀರ್ಪು ಬಂದಿದೆ. ನೀರೇ ಇಲ್ಲದೇ ಇರುವ ಸಂದರ್ಭದಲ್ಲಿ ನಮ್ಮ ಅಹವಾಲು ಸರಿಯಾದ ರೀತಿ ಕೇಳಿದ್ದರೂ ನ್ಯಾಯಾಲಯವು ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಪಾಲಿಸುವಂತೆ ಹೇಳಿದೆ. ಡೆಡ್ ಸ್ಟೋರೇಜ್ ಹೊರತುಪಡಿಸಿ ಉಳಿಯುವ 10 ಟಿಎಂಸಿ ನೀರಿನಲ್ಲಿ ನಾವು ನೀರು ಬಿಡುವುದು ಹೇಗೆ? ಎಂದು ಪ್ರಶ್ನಿಸಿದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕೊಟ್ಟ ಸಲಹೆ ಏನಿದೆ? ಐದು ಸಾವಿರ ಕ್ಯೂಸೆಕ್ ನೀರು ಬಿಡುವ ವಿಚಾರ ಅದಕ್ಕೆ ಸಂಬಂಧಿಸಿದಂತೆ ದಾಖಲೆಯನ್ನು ಕೂಡ ವಕೀಲರು ಕೊಟ್ಟಿದ್ದಾರೆ. ನೀರು ಎಷ್ಟಿದೆ, ಏನು ಅನ್ನೋದನ್ನೂ ಅವರು ಮನವರಿಕೆ ಮಾಡಿಕೊಟ್ಟಿದ್ದಾರೆ. ಎಲ್ಲಾ ಕಡೆ ಪ್ರತಿಭಟನೆ ಆಗುತ್ತಿದೆ. ಪ್ರತಿಭಟನೆ ಉಗ್ರ ರೂಪ ಪಡೆಯಬಾರದು ಅಷ್ಟೇ. ಮುಖ್ಯಮಂತ್ರಿ ಅವರು ನಗರಕ್ಕೆ ಬಂದ ಬಳಿಕ ಈ ಬಗ್ಗೆ ನಾವು ಚರ್ಚೆ ಮಾಡುತ್ತೇವೆ ಎಂದರು.
ಕಾವೇರಿ ಭಾವನಾತ್ಮಕ ವಿಚಾರ ಹೋರಾಟ ನಮ್ಮ ಜನರ ಹಕ್ಕು. ಹಾಗಂತ ಅಹಿತಕರ ವಾತಾವರಣ ನಿರ್ಮಿಸಬೇಡಿ. ಕಾನೂನು ಮುಖ್ಯ ಅನ್ನೋದನ್ನು ಮರೆಯಬೇಡಿ. ಸಂಕಷ್ಟ ಸೂತ್ರ ರಚನೆ ಬೇಕೇಬೇಕು. ಅದು ಇಲ್ಲವೆಂದರೆ ಈ ಸಮಸ್ಯೆ ಹಾಗೆ ಆಗುತ್ತದೆ ಎಂದು ಹೇಳಿದರು.
