ನವದೆಹಲಿ: ಒಡಿಶಾ ರೈಲು ದುರಂತದ (Odisha Train Tragedy) ತನಿಖೆ ಚುರುಕುಗೊಂಡಿದ್ದು ಕೇಂದ್ರೀಯ ತನಿಖಾ ದಳದ (CBI) ವಿಚಾರಣೆಯ ಎದುರಿಸಿದ್ದ ಜ್ಯೂನಿಯರ್ ಎಂಜಿನಿಯರ್ (Signal Junior Engineer) ಕುಟುಂಬದೊಂದಿಗೆ ನಾಪತ್ತೆಯಾಗಿದ್ದಾರೆ. ಸೊರೋ ಸೆಕ್ಷನ್ ಸಿಗ್ನಲ್ ಆಫೀಸರ್ ಅಮೀರ್ ಖಾನ್ (Amir Khan) ಅವರನ್ನು ಈ ಹಿಂದೆ ಸಿಬಿಐ ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಿತ್ತು. ಮತ್ತಷ್ಟು ವಿಚಾರಣೆ ನಡೆಸಲು ಸೋಮವಾರ ಸಿಬಿಐ ಅಧಿಕಾರಿಗಳು ಅಮೀರ್ ಖಾನ್ ಮನೆಗೆ ತೆರಳಿದ್ದಾಗ ಮನೆಯಲ್ಲಿ ಯಾರೂ ಇರಲಿಲ್ಲ ಮತ್ತು ಬೀಗ ಜಡಿಯಲಾಗಿತ್ತು.
ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಸಿಬಿಐ ಈಗ ಅಮೀರ್ ನೆಲೆಸಿದ್ದ ಬಾಡಿಗೆ ಮನೆಯನ್ನು ಸೀಲ್ ಮಾಡಿದೆ. ಅಷ್ಟೇ ಅಲ್ಲದೇ ಮನೆಯ ಮೇಲೆ ನಿಗಾ ಇಡಲು ಇಬ್ಬರು ಅಧಿಕಾರಿಗಳನ್ನು ನಿಯೋಜಿಸಿದೆ. ಬಾಲಾಸೋರ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ ಆಧಾರದಲ್ಲಿ ಸಿಬಿಐ ತನಿಖೆ ನಡೆಸುತ್ತಿದೆ. ಕೆಲ ದಿನಗಳ ಹಿಂದೆ ಬಹನಾಗಾ ರೈಲ್ವೆ ನಿಲ್ದಾಣ, ಅಲ್ಲಿನ ಪ್ಯಾನಲ್ ರೂಂ, ರೆಕಾರ್ಡ್ ರೂಂ, ರಿಲೇ ರೂಂ ಪರಿಶೀಲನೆ ನಡೆಸಿ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿತ್ತು.
ಮೂಲಗಳ ಪ್ರಕಾರ, ಬಾಲಸೋರ್ನಲ್ಲಿ ಸಂಭವಿಸಿದ ರೈಲು ದುರಂತದಲ್ಲಿ ಬಹನಾಗಾ ಬಜಾರ್ನ ಸ್ಟೇಷನ್ ಮಾಸ್ಟರ್ ಸೇರಿದಂತೆ ಐವರು ರೈಲ್ವೆ ನೌಕರರು ಭಾಗಿಯಾಗಿರುವ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಇತರ ನಾಲ್ವರು ಉದ್ಯೋಗಿಗಳು ಸಿಗ್ನಲಿಂಗ್ ಸಂಬಂಧಿತ ಕೆಲಸದ ಜವಾಬ್ದಾರಿಯನ್ನು ಹೊಂದಿದ್ದರು ಮತ್ತು ಅಪಘಾತದ ಸಮಯದಲ್ಲಿ ಕರ್ತವ್ಯದಲ್ಲಿದ್ದರು.