ಬೆಂಗಳೂರು: ಅಶ್ಲೀಲ ಸಿಡಿ ಭೀತಿ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಯಾವುದೇ ಮಾನಹಾನಿಯಾಗುವಂತಹ ವರದಿ, ದೃಶ್ಯ, ಪೋಟೋ ಸೇರಿದಂತೆ ಯಾವುದೇ ರೀತಿಯ ಸುದ್ದಿಗಳನ್ನು ಪ್ರಕಟಿಸದಂತೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರ ಪುತ್ರ ಕೆಇ ಕಾಂತೇಶ್ ನಗರದ ನ್ಯಾಯಾಲಯದಿಂದ ಮಾಧ್ಯಮಗಳ ವಿರುದ್ಧ ನಿರ್ಬಂಧ ಆದೇಶ ಪಡೆದಿದ್ದಾರೆ.
ಕಾಂತೇಶ್ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ಸಿಸಿಎಚ್ 11ನೇ ನ್ಯಾಯಾಲಯ ಇಂಟರ್ನೆಟ್, ಫೇಸ್ಬುಕ್, ವಾಟ್ಸ್ಯಾಪ್, ಯೂಟ್ಯೂಬ್ ಚಾನಲ್ ಸೇರಿದಂತೆ ಎಲ್ಲಾ ಮುದ್ರಣ, ದೃಶ್ಯ ಹಾಗೂ ಸಾಮಾಜಿಕ ಮಾಧ್ಯಮಗಳ ವಿರುದ್ಧ ನಿರ್ಬಂಧ ಆದೇಶ ನೀಡಿದೆ. ಅಲ್ಲದೆ, ಪ್ರಕರಣದ ಸಂಬಂಧ ಎಲ್ಲಾ 50 ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿರುವ ನ್ಯಾಯಾಲಯ, ವಿಚಾರಣೆಯನ್ನು ಆಗಸ್ಟ್ 3 ಕ್ಕೆ ಮುಂದೂಡಿದೆ.
ಪೋಟೊ, ದೃಶ್ಯಗಳನ್ನುಪ್ರಸಾರಮಾಡುವಂತಿಲ್ಲ
ಅರ್ಜಿದಾರರ ಪರ ವಾದ ಆಲಿಸಿದ ಬಳಿಕ ನ್ಯಾಯಾಲಯ, “ಮುಂದಿನ ಅದೇಶದವರೆಗೆ ಅರ್ಜಿದಾರರ ವಿರುದ್ಧ ಅವಹೇಳನಕಾರಿ ಅಥವಾ ಮಾನಹಾನಿಯಾಗುವಂತಹ ಯಾವುದೇ ರೀತಿಯ ಸುದ್ದಿ, ಪೋಟೊ, ದೃಶ್ಯಗಳನ್ನು ಪ್ರಸಾರ ಮಾಡುವಂತಿಲ್ಲ” ಎಂದು ಆದೇಶಿಸಿದೆ. ಅರ್ಜಿದಾರರು ಸಲ್ಲಿಸಿರುವ ಮಾಹಿತಿ ಗಮನಿಸಿದರೆ ಮೇಲ್ನೋಟಕ್ಕೆ ಮಾಧ್ಯಮಗಳು ಅವರ ವಿರುದ್ಧ ಮಾನಹಾನಿಕಾರ ವರದಿ, ವಿಡಿಯೋಗಳನ್ನು ಪ್ರಸಾರ ಮಾಡುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ, ಸುಪ್ರೀಂಕೋರ್ಟ್ನ ಹಲವು ತೀರ್ಪುಗಳ ಆಧಾರದಲ್ಲಿಈ ನಿರ್ಬಂಧ ಆದೇಶ ಹೊರಡಿಸಲಾಗುತ್ತಿದೆ, ಎಂದು ನ್ಯಾಯಾಲಯ ಹೇಳಿದೆ.
ಹೆಸರಿಗೆಮಸಿಬಳಿಯುವಯತ್ನ
ಅರ್ಜಿದಾರರರ ಪರ ವಕೀಲರು, ‘ಲೋಕಸಭಾ ಚುನಾವಣೆ ಸಮಯದಲ್ಲಿ ಉದ್ದೇಶಪೂರ್ವಕವಾಗಿಯೇ ಅವರ ಹೆಸರಿಗೆ ಮಸಿ ಬಳಿಯಲು ಪ್ರಯತ್ನ ನಡೆಸಲಾಗುತ್ತಿದೆ. ಹಾಗಾಗಿ, ಯಾವುದೇ ರೀತಿಯ ಆಶ್ಲೀಲ ಆಡಿಯೋ, ವಿಡಿಯೋ, ಪೋಟೊಗಳನ್ನು ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಬೇಕು ‘ ಎಂದು ನ್ಯಾಯಾಲಯವನ್ನು ಕೋರಿದ್ದರು.