ನವದೆಹಲಿ: ತ್ರಿವಳಿ ತಲಾಖ್ ಅನ್ನು ನಿಷೇಧಿಸುವ ತಮ್ಮ ಸರ್ಕಾರದ ನಿರ್ಧಾರ ಮುಸ್ಲಿಂ ಮಹಿಳೆಯರಿಗೆ (Muslim Women) ಸುರಕ್ಷತಾ ಭಾವನೆಯನ್ನು ಹೆಚ್ಚಿಸಿದೆ. ಮುಂಬರುವ ರಕ್ಷಾ ಬಂಧನ (Raksha Bandhan) ಹಬ್ಬವನ್ನು ಮುಸ್ಲಿಂ ಮಹಿಳೆಯ ರೊಂದಿಗೂ ಆಚರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಬಿಜೆಪಿ ನಾಯಕರಿಗೆ ಕರೆ ನೀಡಿದ್ದಾರೆ. 2024ರ ಲೋಕಸಭಾ ಚುನಾವಣೆ ಹಿನ್ನೆಲೆ ಪಶ್ಚಿಮ ಬಂಗಾಳ, ಒಡಿಶಾ ಹಾಗೂ ಜಾರ್ಖಂಡ್ನ ಬಿಜೆಪಿ ನೇತೃತ್ವದ ಎನ್ಡಿಎ ಸಂಸದರ ಸಭೆಯನ್ನು ನಡೆಸಿದ್ದು, ಈ ವೇಳೆ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.
ಸಮಾಜದ ಪ್ರತಿಯೊಂದು ವರ್ಗದವರೊಂದಿಗೆ ಸಂಪರ್ಕ ಸಾಧಿಸುವುದು ಅತ್ಯಗತ್ಯ. ಮುಸ್ಲಿಂ ಪುರುಷರು ತಮ್ಮ ಪತ್ನಿಯರಿಗೆ ತ್ವರಿತವಾಗಿ ನೀಡುವ ವಿಚ್ಛೇದನದ ಪದ್ಧತಿಯನ್ನು ಈ ಸರ್ಕಾರ ಅಪರಾಧ ಎಂದು ಪರಿಗಣಿಸಿದೆ. ಈ ನಿರ್ಧಾರ ಮುಸ್ಲಿಂ ಮಹಿಳೆಯರಲ್ಲಿ ಹೆಚ್ಚಿನ ಧೈರ್ಯ ತುಂಬಿದೆ. ಈ ಬಾರಿಯ ರಕ್ಷಾ ಬಂಧನದ ಸಮಯದಲ್ಲಿ ಈ ಅಲ್ಪಸಂಖ್ಯಾತ ಮಹಿಳೆಯರನ್ನು ತಲುಪುವ ಕೆಲಸ ಆಗಬೇಕು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಕೆಲ ಸಂಸದರಿಗೆ ಸೂಚನೆ ನೀಡಿದ್ದಾರೆ.
2019 ರಲ್ಲಿ ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಮಸೂದೆಯನ್ನು ಸಂಸತ್ತು ಅಂಗೀಕರಿಸಿದೆ. ಮುಸ್ಲಿಮರ ತ್ರಿವಳಿ ತಲಾಖ್ ಅಭ್ಯಾಸವನ್ನು ಕಾನೂನು ಬಾಹಿರ ಹಾಗೂ ಪತಿಗೆ ಜೈಲು ಶಿಕ್ಷೆ ವಿಧಿಸುವ ಅಪರಾಧ ಎಂದು ಘೋಷಿಸಿದೆ. ರಕ್ಷಾ ಬಂಧನ ಹಬ್ಬ ಸಹೋದರ – ಸಹೋದರಿಯರ ನಡುವಿನ ಬಾಂಧವ್ಯದ ಆಚರಣೆಯಾಗಿದೆ. ಈ ಬಾರಿ ಹಬ್ಬ ಆಗಸ್ಟ್ 30 ರಂದು ಬರಲಿದೆ