ಬೆಂಗಳೂರು:- ಶಿವನನ್ನು ಬೇಡುವ ಶುಭ ದಿನವೇ ಶಿವರಾತ್ರಿ. ಈ ಶಿವರಾತ್ರಿ ಹಬ್ಬ ಇಂದು ಬಂದೇ ಬಿಡ್ತು. ಇಡೀ ದೇಶದಲ್ಲಿ ಕೋಟ್ಯಂತರ ಹಿಂದೂಗಳು ಆಚರಣೆ ಮಾಡುತ್ತಿದ್ದು, ಕರ್ನಾಟಕದ ಹಲವೆಡೆ ಇಂದು ಬೆಳಗ್ಗೆಯಿಂದಲೇ ಶಿವರಾತ್ರಿ ಸಂಭ್ರಮ ಮನೆ ಮಾಡಿದೆ.
ಹಿಂದೂ ಕ್ಯಾಲೆಂಡರ್ ಪ್ರಕಾರ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯಂದು ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ತನ್ನ ನಂಬಿ ಬಂದ ಭಕ್ತರ ಇಷ್ಟಾರ್ಥಗಳಿಗೆ ಎಂದಿಗೂ ನಿರಾಸೆ ಮಾಡದ ದಯಾಮಯಿ ಶಿವನಿಗೆ ಇಂದು ವಿಶೇಷ ಪೂಜೆ ನೆರವೇರಲಿದೆ. ಈ ಹಬ್ಬದಂದು ದಿನವಿಡೀ ಪೂಜೆ, ಉಪವಾಸ ಮಾಡಿ, ರಾತ್ರಿಯಿಡೀ ಜಾಗರಣೆ ಮಾಡಿ ಕೈಲಾಸ ನಾಥ ಶಿವನನ್ನು ಆರಾಧಿಸುವುದು ಸಂಪ್ರದಾಯವಾಗಿದೆ.
ಬೆಂಗಳೂರಿನಲ್ಲಿ ಶಿವನ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆಗಳು ಆರಂಭಗೊಂಡಿವೆ. ನಗರದ ಕಾಡುಮಲ್ಲೇಶ್ವರ, ಗವಿಗಂಗಾಧರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತಿದೆ. ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ 3 ಗಂಟೆಯಿಂದಲೇ ಪೂಜೆ ಆರಂಭಗೊಂಡಿದ್ದು, ಮಲ್ಲಿಕಾರ್ಜುನನಿಗೆ ಪಂಚಾಭಿಷೇಕ ಬಳಿಕ ಅಂದರೆ, ಬೆಳಗ್ಗೆ 5.30 ರಿಂದ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಇಂದು ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಲಿರುವ ಭಕ್ತಾದಿಗಳು ಆಗಮಿಸಲಿದ್ದು, ರಾತ್ರಿ 10 ಗಂಟೆವರೆಗೂ ದೇವರ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಭಕ್ತಾದಿಗಳನ್ನು ನಿಯಂತ್ರಿಸಲು ದೇವಸ್ಥಾನದ ಬಳಿ ಪೊಲೀಸರ ನಿಯೋಜನೆ ಮಾಡಲಾಗಿದೆ. ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಪೊಲೀಸರು ಬಂದ್ ಮಾಡಿದ್ದಾರೆ.
ಗವಿಗಂಗಾಧರ ದೇವಸ್ಥಾನದಲ್ಲಿ ನಸುಕಿನ ಜಾವದಿಂದಲೇ ವಿಶೇಷ ಪೂಜೆ ಆರಂಭಗೊಂಡಿದ್ದು, ಅರ್ಚಕರು ಶಿವಲಿಂಗಕ್ಕೆ ವಿಶೇಷ ಅಭಿಷೇಕ ಮಾಡಿ ಪೂಜೆ ಸಲ್ಲಿಸುತ್ತಿದ್ದಾರೆ. ಭಕ್ತರು ಭೋಲೆ ನಾಥನ ದರ್ಶನಕ್ಕೆ ಬೆಳಗ್ಗೆಯಿಂದಲೇ ಸಾಲುಗಟ್ಟಿ ನಿಂತಿದ್ದಾರೆ
ಮೈಸೂರು ಅರಮನೆಯಲ್ಲೂ ಶಿವರಾತ್ರಿ ಸಂಭ್ರಮ ಕಳೆಗಟ್ಟಿದೆ. ಅರಮನೆಯ ತ್ರಿನೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಲಿದೆ. ಶಿವಲಿಂಗಕ್ಕೆ ಸುಮಾರು 11 ಕೆಜಿ ತೂಕದ ಚಿನ್ನದ ಮುಖವಾಡ ಧಾರಣೆ ಮಾಡಲಾಗುತ್ತಿದೆ. ಜಯಚಾಮರಾಜೇಂದ್ರರು ಕಾಣಿಕೆ ರೂಪದಲ್ಲಿ ನೀಡಿದ್ದ ಚಿನ್ನದ ಮುಖವಾಡವನ್ನು ಶಿವಲಿಂಗಕ್ಕೆ ವರ್ಷದಲ್ಲಿ ಒಂದು ಬಾರಿ ಮಾತ್ರ ಧಾರಣೆ ಮಾಡಲಾಗುತ್ತದೆ.