ಬೆಂಗಳೂರು: ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿ ನೀಡಲು FCI ತಿರಸ್ಕಾರ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾಜಿ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲವೆಂದು ಸಿಎಂ ಆರೋಪಿಸಿದ್ದಾರೆ. ಅಕ್ಕಿ ಕೊಡುತ್ತೇವೆಂದು ಹೇಳಿದ್ದ ಕಾಂಗ್ರೆಸ್ ಈಗ ಜನರಿಗೆ ಮೋಸ ಮಾಡ್ತಿದೆ. ರೈತರಿಗೆ, ಜನರಿಗೆ ಕೊಟ್ಟ ಮಾತಿಂದ ತಪ್ಪಿಸಿಕೊಳ್ಳಲು ರಾಜಕಾರಣ ಮಾಡುತ್ತಿದೆ. ಆಹಾರ ಭದ್ರತಾ ಕಾಯ್ದೆಯಡಿ ಎಲ್ಲರಿಗೂ ಕೇಂದ್ರ ಸರ್ಕಾರ ಅಕ್ಕಿ ನೀಡುತ್ತಿದೆ.
ಯಾವುದೇ ಖರ್ಚು ಇಲ್ಲದೇ ಪ್ರತಿ ವ್ಯಕ್ತಿಗೆ ತಲಾ 5 ಕೆಜಿ ಅಕ್ಕಿ ನೀಡುತ್ತಿದೆ. ಸಾಗಣೆ ವೆಚ್ಚ, ನಿರ್ವಹಣಾ ವೆಚ್ಚಗಳನ್ನು ಕೇಂದ್ರ ಸರ್ಕಾರವೇ ಭರಿಸುತ್ತಿದೆ. ಸತ್ಯ ಹೇಳಬೇಕೆಂದ್ರೆ ರಾಜ್ಯ ಸರ್ಕಾರ 10 ಕೆಜಿ ಹೆಚ್ಚುವರಿ ಅಕ್ಕಿ ಕೊಡಬೇಕು. ಕೇಂದ್ರ ನೀಡುವ ಅಕ್ಕಿ ಸೇರಿ ರಾಜ್ಯ ಸರ್ಕಾರ ಒಟ್ಟು 15 ಕೆಜಿ ಅಕ್ಕಿ ನೀಡಬೇಕು. ಆದ್ರೆ ಕೇಂದ್ರದ 5 ಕೆಜಿ, ರಾಜ್ಯದ 5 ಕೆಜಿ ಸೇರಿಸಿ 10 ಕೆಜಿ ನೀಡ್ತೀವಿ ಎನ್ನುತ್ತಿದೆ ಎಂದರು.