ನವದೆಹಲಿ: ಸಂಸದರು ಜನರ ಪರವಾಗಿ ಧ್ವನಿ ಎತ್ತಲು ಹಾಗೂ ಅದಾನಿ- ಹಿಂಡೆನ್ ಬರ್ಗ್ ವಿಚಾರವನ್ನು ಜೆಪಿಸಿ ತನಿಖೆಗೆ ಒಪ್ಪಿಸುವ ಬೇಡಿಕೆಗೆ ಒಪ್ಪದ ಸರ್ಕಾರ ಸಂಸತನ್ನು ರಬ್ಬರ್ ಸ್ಟಾಂಪ್ ಆಗಿ ಮಾಡಿದೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಸಂಸದರೊಬ್ಬರ ಟೀಕೆ ಮತ್ತು ಅಮಾನತಿನ ಹೇಳಿಕೆಯನ್ನು ಉಲ್ಲೇಖಿಸಿ ಈ ರೀತಿ ಹೇಳಿರುವ ಖರ್ಗೆ, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಲಿದ್ದು, 2024ರಲ್ಲಿ ಕಾಂಗ್ರೆಸ್ ದೋಸ್ತಿ ಪಕ್ಷಗಳೊಂದಿಗೆ ಸೇರಿ ಸರ್ಕಾರ ರಚಿಸಲಿದೆ ಎಂದರು.
ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಜನರು ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಸುವಂತೆ ಮನವಿ ಮಾಡಿದರು. ಇಲ್ಲದಿದ್ದರೆ ಸರ್ವಾಧಿಕಾರ ಬಂದು ಎಲ್ಲರನ್ನೂ ಮುಗಿಸುತ್ತದೆ ಎಂದು ಹೇಳಿದರು. ಅದಾನಿ ವಿವಾದವನ್ನು ಪ್ರಸ್ತಾಪಿಸಿದ ಎಐಸಿಸಿ ಅಧ್ಯಕ್ಷರು, ಸರ್ಕಾರ ಬಂಡವಾಳಶಾಹಿಗಳ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಸರ್ಕಾರ ಸಂಸತ್ತನ್ನು ರಬ್ಬರ್ ಸ್ಟಾಂಪ್ ಆಗಿ ಮಾಡಿದೆ. ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮುಂದಾದರೆ ನೋಟಿಸ್ ನೀಡಲಾಗುತ್ತದೆ. ಒಬ್ಬ ಮಹಿಳಾ ಸಂಸದರನ್ನು ಅಮಾನತುಗೊಳಿಸಲಾಗಿದೆ, ಏಕೆ? ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಸಂಸದರು ಜನರ ಸಮಸ್ಯೆಗಳು ಮತ್ತು ಅದಾನಿ ವಿರುದ್ಧ ಧ್ವನಿ ಎತ್ತುತ್ತಿದ್ದರು ಎಂದರು.