ಬೆಂಗಳೂರು: ಬಹುನಿರೀಕ್ಷಿತ ಏಕದಿನ ಏಷ್ಯಾಕಪ್ ಟೂರ್ನಿಗೆ ಬಿಸಿಸಿಐ ಆಯ್ಕೆ ಸಮಿತಿಯು ಬಲಿಷ್ಠ 17 ಸದಸ್ಯರ ತಂಡವನ್ನು ಪ್ರಕಟಿಸಿದ್ದು, 2023ನೇ ಸಾಲಿನ ಏಷ್ಯಾಕಪ್ ಟೂರ್ನಿಯು ಆಗಸ್ಟ್ 30 ರಿಂದ ಅದ್ಧೂರಿ ಚಾಲನೆ ಪಡೆದರೂ, ಸೆಪ್ಟೆಂಬರ್ 2 ರಂದು ರೋಹಿತ್ ಶರ್ಮಾ ಪಡೆ ಸಾಂಪ್ರದಾಯಿಕ ವೈರಿ ಪಾಕಿಸ್ತಾನ ವಿರುದ್ಧ ನಡೆಯುವ ಹೈವೋಲ್ಟೇಜ್ ಪಂದ್ಯ ಆಡುವ ಮೂಲಕ ತಮ್ಮ ಪಯಣ ಆರಂಭಿಸಲಿದೆ. ಅನುಭವಿ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಹಾಗೂ ವಿಕೆಟ್ ಕೀಪರ್, ಬ್ಯಾಟರ್ ಸಂಜು ಸ್ಯಾಮ್ಸನ್ ಸ್ಥಾನ ಕಳೆದುಕೊಂಡಿದ್ದು, ಇದಕ್ಕೆ ಕಾರಣವಾದ ಅಂಶವನ್ನು ಕ್ರಿಕೆಟ್ ದಿಗ್ಗಜ ಸುನೀಲ್ ಗವಾಸ್ಕರ್ ತಿಳಿಸಿದ್ದಾರೆ.
ಸಂಜು- ಚಹಲ್ ಸ್ಥಾನ ಕಳೆದುಕೊಂಡಿದ್ದೇಕೆ?
ಏಷ್ಯಾ ಕಪ್ ಟೂರ್ನಿಯಲ್ಲಿ ವಿಕೆಟ್ ಕೀಪರ್, ಬ್ಯಾಟರ್ ಸಂಜು ಸ್ಯಾಮ್ಸನ್ ಹಾಗೂ ಅನುಭವಿ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರು ಸ್ಥಾನ ಕಳೆದುಕೊಳ್ಳಲು ಪ್ರಮುಖ ಕಾರಣವೇನು ಎಂಬುದನ್ನು ಕ್ರಿಕೆಟ್ ದಿಗ್ಗಜ ಸುನೀಲ್ ಗವಾಸ್ಕರ್ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.
ಸಂಜು ಸ್ಯಾಮ್ಸನ್ ಅವರು ವೆಸ್ಟ್ ಇಂಡೀಸ್ ಸರಣಿಯಲ್ಲಿ ಉತ್ತಮ ರನ್ ಗಳಿಸಿದ್ದರೆ ಖಂಡಿತವಾಗಿಯೂ ಏಷ್ಯಾಕಪ್ ಟೂರ್ನಿಯಲ್ಲಿ ಸ್ಥಾನ ಪಡೆಯುತ್ತಿದ್ದರು. ಅದೇ ರೀತಿ ಯುಜ್ವೇಂದ್ರ ಚಹಲ್ ವಿಷಯದಲ್ಲೂ ಆಗಿದೆ. ಏಷ್ಯಾಕಪ್ ನಂತಹ ಮಹಾಟೂರ್ನಿಗಳಲ್ಲಿ ಟ್ರೋಫಿ ಗೆಲ್ಲುವ ಉದ್ದೇಶದಿಂದ ಆಯ್ಕೆಗಾರರು ತಂಡದ ಸಮತೋಲನೆಗೆ ಹೆಚ್ಚು ಮಹತ್ವ ನೀಡುತ್ತಾರೆ.
ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರ ಬ್ಯಾಟಿಂಗ್ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರಿಗಿಂತ ಉತ್ತಮವಾಗಿದ್ದು, ಮಹಾ ಟೂರ್ನಿಯ ಸ್ಲಾಗ್ ಓವರ್ ಗಳಲ್ಲಿ ಬೌಲರ್ ಗಳು ಕೂಡ ಬ್ಯಾಟಿಂಗ್ ಮಾಡುವಂತಿರಬೇಕು. ಆದ್ದರಿಂದ ಚಹಲ್ ಸ್ಥಾನ ಕಳೆದುಕೊಳ್ಳುವಂತೆ ಮಾಡಿದೆ. ಇದೊಂದು ಉತ್ತಮ ತಂಡವಾಗಿದ್ದು ಅನುಭವಿ ಆಟಗಾರರೆಲ್ಲ ತಂಡಕ್ಕೆ ಮರಳಿದ್ದಾರೆ ಎಂದು ಹೇಳಿದ್ದಾರೆ.