ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹಿತ ನಾಲ್ವರನ್ನು ಜು.4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಎದುರಿಸುತ್ತಿದ್ದ ನಟ ದರ್ಶನ್ ಸೇರಿ ನಾಲ್ವರು ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿ ಇಂದಿಗೆ ಅಂತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಆರೋಪಿಗಳನ್ನು ಮತ್ತೆ 24 ನೇ ಎಸಿಎಂಎಂ ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ವಾದ-ಪ್ರತಿವಾದಗಳನ್ನು ಆಲಿಸಿದ ಕೋರ್ಟ್ ಆರೋಪಿಗಳಾದ ದರ್ಶನ್, ವಿನಯ್, ಧನರಾಜ್ ಹಾಗೂ ಪ್ರದೋಶ್ ನನ್ನು ಜುಲೈ 4 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಈಗಾಗಲೇ ಆರೋಪಿಗಳನ್ನು ಮೂರು ಬಾರಿ ಕಸ್ಟಡಿಗೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ನಟ ದರ್ಶನ್ ಮನೆಯಲ್ಲಿ ಸಿಕ್ಕಂತಹ ಹಣದ ಬಗ್ಗೆ ವಿಚಾರಿಸಲು ಎರಡು ದಿನದ ಹಿಂದೆ ಪೊಲೀಸರು, ದರ್ಶನ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಮತ್ತೆ ಕಸ್ಟಡಿಗೆ ತೆಗೆದುಕೊಂಡಿದ್ದರು. ಅಷ್ಟೊಂದು ಹಣ ಎಲ್ಲಿಂದ ಬಂತು? ಯಾವ ಅಕೌಂಟ್ನಿಂದ ಹಣ ಡ್ರಾ ಮಾಡಿದ್ರಿ? ಬೇರೆ ಯಾರಾದ್ರೂ ಹಣ ನೀಡಿದ್ರಾ? ಈ ಹಣಕ್ಕೆ ದಾಖಲೆಗಳು ಇದೆಯಾ? ಅಷ್ಟೊಂದು ಹಣ ಮನೆಯಲ್ಲಿ ಇಡಲು ಕಾರಣ ಏನು? ಹೀಗೆ ಅನೇಕ ಪ್ರಶ್ನೆಗಳನ್ನು ಕೇಳಿ ಪೊಲೀಸರು ಮಾಹಿತಿ ಪಡೆದಿದ್ದಾರೆ.
ರೇಣುಕಾಸ್ವಾಮಿ ಕಿಡ್ನಾಪ್ ಹಾಗೂ ಕೊಲೆ ಪ್ರಕರಣದಲ್ಲಿ ಇದುವರೆಗೆ 17 ಆರೋಪಿಗಳನ್ನು ಬಂಧಿಸಲಾಗಿದೆ. ಅವರ ಪೈಕಿ 13 ಆರೋಪಿಗಳನ್ನು ಈಗಾಗಲೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದೀಗ ಉಳಿದ ನಾಲ್ವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.