ಹೈದರಾಬಾದ್: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ, ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಚಂದ್ರಬಾಬು ನಾಯ್ಡುಗೆ ಆಂಧ್ರಪ್ರದೇಶ ಹೈಕೋರ್ಟ್ 4 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಬಹುಕೋಟಿ ಕೌಶಲಾಭಿವೃದ್ಧಿ ನಿಗಮ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಲಾಗಿದ್ದು, ಜೈಲಿನಲ್ಲಿದ್ದರು. ಆದರೆ ಆರೋಗ್ಯ ಸಮಸ್ಯೆಯಿಂದಾಗಿ ಇದೀಗ ಅವರಿಗೆ ನ್ಯಾಯಾಲಯ ಜಾಮೀನು ನೀಡಿದೆ.
ಅಕ್ಟೋಬರ್ 18 ರಂದು ಕುಟುಂಬದ ಸದಸ್ಯರು ಹಾಗೂ ಟಿಡಿಪಿ (TDP) ಮುಖಂಡರು ರಾಜಮಹೇಂದ್ರವರಂನ ಸೆಂಟ್ರಲ್ ಜೈಲಿಗೆ ತೆರಳಿದ್ದರು. ಪತ್ನಿ ಭುವನೇಶ್ವರಿ, ಪುತ್ರ ಲೋಕೇಶ್ ಮತ್ತು ಸೊಸೆ ಬ್ರಹ್ಮಣಿ ಅವರೊಂದಿಗೆ ಪಕ್ಷದ ಮುಖಂಡರಾದ ಚಿನರಾಜಪ್ಪ, ರಾಮಮೋಹನ್ ನಾಯ್ಡು, ಬುಚ್ಚಯ್ಯ ಚೌಧರಿ, ಕಲಾ ವೆಂಕಟರಾವ್ ಮತ್ತಿತರರು ನಾಯ್ಡು ಅವರನ್ನು ಭೇಟಿಯಾಗಿದ್ದರು. ಬಳಿಕ ನಾಯ್ಡು ಆರೋಗ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದರು.
ಈ ಸಂಬಂಧ ಟಿಡಿಪಿ ನಾಯಕರು ಸುದ್ದಿಗಾರರೊಂದಿಗೆ ಮಾತನಾಡಿ, ನಾಯ್ಡು ಅವರನ್ನು ನೋಡಿ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಅವರ ಆರೋಗ್ಯ ಬಗ್ಗೆ ಚಿಂತಿತರಾಗಿದ್ದಾರೆ. ಹೀಗಾಗಿ ಅವರಿಗೆ ವೈದ್ಯಕೀಯ ಪರೀಕ್ಷೆಯ ಅಗತ್ಯತೆ ಇದೆ. ಈ ಹಿನ್ನೆಲೆಯಲ್ಲಿ ವೈದ್ಯರ ಸೂಚನೆಗಳನ್ನು ಜೈಲು ಅಧಿಕಾರಿಗಳಿಂದ ಲಿಖಿತ ರೂಪದಲ್ಲಿ ಕೇಳಿದ್ದೇವೆ. ಅಲ್ಲದೆ ಪತಿಯ ಅನಾರೋಗ್ಯ ಕುರಿತಾಗಿ ಭುವನೇಶ್ವರಿ ಕೂಡ ಪತ್ರ ಬರೆದಿದ್ದಾರೆ ಎಂದಿದ್ದರು.