ಒಂದೆಡೆ ಬಿಜೆಪಿಯವರು ಸಂಸ್ಕೃತಿಯ ಪಾಠ ಮಾಡುತ್ತಾರೆ. ನೈತಿಕತೆ ಎನ್ನುತ್ತಾರೆ. ಮತ್ತೊಂದು ಕಡೆ ‘ರಾಮ ರಾಮ’ ಎಂದು ಜಪ ಮಾಡುತ್ತಾರೆ. ಆದರೆ, ಅದೇ ಬಿಜೆಪಿಯವರು ತಾಯಂದಿರನ್ನೇ ಮಂಚಕಕ್ಕೆ ಕರೆಯುವ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಡಿಕೆ ಸುರೇಶ್ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಶಾಸಕ ಮುನಿರತ್ನ ಅವರು ದಲಿತ ಸಮುದಾಯಕ್ಕೆ ಕೀಳು ಪದಗಳಿಂದ ಸಂಬೋಧನೆ ಮಾಡಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಮುನಿರತ್ನ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಸುಮೋಟೋ ಕೇಸ್ ದಾಖಲಿಸಬೇಕು. ಎರಡು ಜಾತಿಗಳನ್ನು ಎತ್ತಿಕಟ್ಟುವ ಕೆಲಸ ಆಗಿದೆ ಎಂದರು.
ಇದನ್ನು ಬಿಜೆಪಿ ನಾಯಕರು ಯಾವ ರೀತಿ ಅರಗಿಸಿಕೊಳ್ಳುತ್ತಿದ್ದಾರೆ? ಬಿಜೆಪಿಯ ಒಬ್ಬೇ ಒಬ್ಬರು ನಾಯಕರು ಇದುವರೆಗೂ ಹೇಳಿಕೆ ನೀಡಿಲ್ಲ. ಬಿಜೆಪಿಯವರಿಗೆ ನೈತಿಕತೆ ಇದ್ರೆ ಮುನಿರತ್ನ ಅವರನ್ನು ಇಷ್ಟೊತ್ತಿಗಾಗಲೇ ಪಕ್ಷದಿಂದ ವಜಾ ಮಾಡಬೇಕಿತ್ತು ಎಂದಿದ್ದಾರೆ. ನಾವ್ಯಾರೂ ಕೂಡ ಕೇಳಿರದ ಅವಾಚ್ಯ ಪದಗಳನ್ನು ಕೇಳಬೇಕಾಗಿದೆ.
ಇದಕ್ಕಿಂತ ಕೀಳು ಪದಗಳನ್ನು ಯಾರೂ ಉಪಯೋಗಿಸಲು ಸಾಧ್ಯವಿಲ್ಲ. ಕೀಳರಿಮೆ ಮನಸ್ಥಿತಿ ಇರುವವರು ಯಾರೂ ಇಂತಹ ಪದ ಬಳಸಲ್ಲ. ಒಂದು ಕಡೆ ರಾಮನ ಜಪ, ಒಂದು ಕಡೆ ಸಂಸ್ಕೃತಿ ಜಪ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಅದೇ ತಾಯಂದಿರನ್ನು ಮಂಚಕ್ಕೆ ಕರೆಯುವ ಜಪ ಮಾಡುತ್ತಾರೆ ಎಂದು ವಾಗ್ದಾಳಿ ಮಾಡಿದರು.