ಆಸ್ಟ್ರೇಲಿಯಾದ ವೇಗದ ದಾಳಿಗೆ ನಲುಗಿ 2 ರನ್ ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಟೀಮ್ ಇಂಡಿಯಾ ಪರ ಅದ್ಭುತ ಇನಿಂಗ್ಸ್ ಕಟ್ಟಿ 85 ರನ್ ಸಿಡಿಸಿದ ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ಮಹತ್ತರ ದಾಖಲೆ ಮುರಿದಿದ್ದಲ್ಲದೆ ಹಲವು ದಾಖಲೆ ನಿರ್ಮಿಸಿದ್ದಾರೆ.
ಚೆನ್ನೈ ನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾನುವಾರ (ಅ.8) ನಡೆದ 2023ರ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 199 ರನ್ ಸಾಧಾರಣ ಗುರಿ ಹಿಂಬಾಲಿಸಿದ ಟೀಮ್ ಇಂಡಿಯಾ , 2 ರನ್ ಗಳಾಗುವಷ್ಟರಲ್ಲಿ ರೋಹಿತ್ ಶರ್ಮಾ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. 4ನೇ ವಿಕೆಟ್ ಗೆ ಜೊತೆಗೂಡಿದ ವಿರಾಟ್ ಕೊಹ್ಲಿ ಹಾಗೂ ಕೆ.ಎಲ್.ರಾಹುಲ್ 165 ರನ್ ಜೊತೆಯಾಟ ಕಟ್ಟಿ ಭಾರತಕ್ಕೆ 6 ವಿಕೆಟ್ ಗಳ ಸ್ಮರಣೀಯ ಗೆಲುವು ತಂದುಕೊಟ್ಟರು. ಪಂದ್ಯದಲ್ಲಿ 6 ಬೌಂಡರಿ ಸಹಿತ 85 ಸಿಡಿಸಿದ ವಿರಾಟ್ ಕೊಹ್ಲಿ, ಗಾಡ್ ಆಫ್ ಕ್ರಿಕೆಟ್ ಖ್ಯಾತಿಯ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ಮಹತ್ತರ ದಾಖಲೆ ಮುರಿದಿದ್ದಲ್ಲದೆ ಹಲವು ಮೈಲುಗಲ್ಲನ್ನು ಸ್ಥಾಪಿಸಿದ್ದು,
ಹನ್ನೊಂದು ಸಾವಿರ ರನ್ ಪೂರೈಸಿದ ಕಿಂಗ್ ಕೊಹ್ಲಿ
ಟೀಮ್ ಇಂಡಿಯಾ ಪರ 3ನೇ ಕ್ರಮಾಂಕದಲ್ಲಿ ಹಲವು ಸ್ಮರಣೀಯ ಇನಿಂಗ್ಸ್ ಆಡಿರುವ ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ವಿರುದ್ಧ 85 ರನ್ ಗಳಿಸಿ ಏಕದಿನ ಸ್ವರೂಪದಲ್ಲಿ 3ನೇ ಕ್ರಮಾಂಕದಲ್ಲಿ 11 ಸಾವಿರ ರನ್ ಪೂರೈಸಿದರು. 3ನೇ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಸಾಲಿನಲ್ಲಿ ವಿಶ್ವಕಪ್ ವಿಜೇತ ಆಟಗಾರ ರಿಕ್ಕಿ ಪಾಂಟಿಂಗ್ (12,662 ರನ್) ಟಾಪ್ 1 ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ(11,000 ರನ್) ಹಾಗೂ ಶ್ರೀಲಂಕಾದ ಕುಮಾರ ಸಂಗಕ್ಕಾರ (9747 ರನ್) ನಂತರದ ಸಾಲಿನಲ್ಲಿದ್ದಾರೆ.