ಬೆಂಗಳೂರು;- ಪೊಲೀಸ್ ಇನ್ ಫಾರ್ಮರ್ ಎಂದು ಪೊಲೀಸರಿಗೆಯೇ ವಂಚನೆ ಮಾಡ್ತಿದ್ದ ಕಿಲಾಡಿಯನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಕಳೆದ ನಾಲ್ಕು ವರ್ಷದಿಂದ ಪೊಲೀಸರಿಗೆ ವಂಚಿಸಿ ಪಬ್ ಬಾರ್ಗಳಲ್ಲಿ ಮೋಜುಮಸ್ತಿ ಮಾಡುತ್ತಿದ್ದ ವಸೀಂ ಎಂಬ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಸೀಂ, ಪೊಲೀಸರ ಜೊತೆಯಲ್ಲಿ ಇದ್ದುಕೊಂಡೇ ಅವರಿಗೆ ಸಹಾಯ ಮಾಡುವಂತೆ ಅವರ ಬಳಿಯಿಂದಲೇ ಹಣ ಪಡೆದು ವಂಚಿಸಿದ್ದಾನೆ. ಅಲ್ಲಿ ಇಲ್ಲಿ ಸುತ್ತಾಡುತ್ತ ಮೋಜು ಮಸ್ತಿ ಮಾಡುತ್ತ, ಹಾಯಾದ ಜೀವನ ನಡೆಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಲ್ಲೊಂದು ದಂಧೆ ನಡೀತಿದೆ, ನಾನು ಅಲ್ಲಿಗೆ ಹೋಗಿ ಲೊಕೇಶನ್ ಕಳಿಸ್ತೀನಿ. ದಂಧೆಯಲ್ಲಿ ಏನೇನು ನಡೆಯುತ್ತೆ ಎಂದು ಮಾಹಿತಿ ನೀಡ್ತಿನಿ ಎಂದು ಪೊಲೀಸರಿಗೆ ಆರೋಪಿ ವಸೀಂ ನಂಬಿಸುತ್ತಿದ್ದ. ಪೊಲೀಸರು ಈಗ್ಲೇ ಬರ್ತೀವಿ ಅಂದ್ರೆ ಬೇಡ ನಾನು ಅಲ್ಲಿಗೆ ಹೋಗಿ ಸ್ಪಾಟ್ ಲೊಕೇಶನ್ ಕಳಿಸ್ತೀನಿ ಅಂತಿದ್ದ. ಸರ್ ಆಟೋ ಪ್ರಾಬ್ಲಂ ಆಗ್ಬಿಟ್ಟಿದೆ, ಪೆಟ್ರೋಲ್ ಬೇಕಿತ್ತು, ಬೈಕ್ ಇಲ್ಲ. ಮನೆಯಲ್ಲಿ ಸಮಸ್ಯೆ ಎಂದು ನಂಬಿಸಿ ಎರಡ್ಮೂರು ಸಾವಿರ ಫೋನ್ ಪೇ ಮಾಡಿ ಅಂತಿದ್ದ. ಇದನ್ನು ನಂಬಿ ಪೊಲೀಸರು ಹಣ ಹಾಕಿದ್ರೆ ಹಣ ಬಂದ ಕೆಲವೇ ಕ್ಷಣಗಳಲ್ಲಿ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗ್ತಿದ್ದ. ಹೀಗೆ ಹಲವು ಸಿಸಿಬಿ ಹಾಗೂ ಲಾ ಆಂಡ್ ಆರ್ಡರ್ ಪೊಲೀಸರಿಗೆ ಆರೋಪಿ ವಸೀಂ ಯಾಮಾರಿಸಿದ್ದಾನೆ. ಸದ್ಯ ಆರೋಪಿಯನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.