ಚಿಕ್ಕೋಡಿ: ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ (Assembly Election) ಹಿನ್ನೆಲೆ ನೀತಿ ಸಂಹಿತೆ (Code of Conduct) ಜಾರಿಯಲ್ಲಿದೆ. ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಚುನಾವಣೆ ಆಯೋಗದ ಪ್ರತಿ ತಾಲೂಕಿನ ಸರಹದ್ದಿನಲ್ಲಿ ಚೆಕ್ ಪೋಸ್ಟ್ (Check Post) ನಿರ್ಮಿಸಿ ಪ್ರತಿಯೊಂದು ವಾಹನ ಹಾಗೂ ವ್ಯಕ್ತಿಗಳ ಮೇಲೆ ಅಧಿಕಾರಿಗಳು ನಿಗಾ ಇಡುವಂತೆ ಸೂಚನೆ ನೀಡಲಾಗುತ್ತಿದೆ. ಇದನ್ನು ಕಟ್ಟುನಿಟ್ಟಿನಿಂದ ರಾಜ್ಯಾದ್ಯಂತ ಅಧಿಕಾರಿಗಳು ಪಾಲನೆ ಮಾಡುತ್ತಿದ್ದಾರೆ. ಆದರೆ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ (Shrimant Patil) ಅವರ ಪುತ್ರನ ಕಾರನ್ನು ಅಧಿಕಾರಿಗಳು ಪರಿಶೀಲನೆ ಮಾಡದೆ ಕರ್ತವ್ಯ ಲೋಪ ಎಸಿಗಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಸ್ಥಳದಲ್ಲಿದ್ದ ಚೆಕ್ ಪೋಸ್ಟ್ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಪ್ರಸಂಗ ನಡೆದಿದೆ.
ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದ ಹೊರವಲಯದ ಮಹಾರಾಷ್ಟ್ರ ಹಾಗೂ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ಮಧ್ಯದಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಿದ್ದು, ಇಲ್ಲಿ ಪ್ರತಿಯೊಂದು ವಾಹನಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಅವರ ಪುತ್ರ ಶ್ರೀನಿವಾಸ ಪಾಟೀಲ್ ಆಗಮಿಸುತ್ತಿದ್ದಂತೆ ಅಧಿಕಾರಿಗಳು ಅವರ ಕಾರನ್ನು ಪರಿಶೀಲನೆ ಮಾಡದೆ ಹಾಗೆ ಬಿಟ್ಟಿದ್ದಾರೆ. ಇದರಿಂದ ಕೆಲವು ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮೇಲಾಧಿಕಾರಿಗಳಿಗೆ ಮೌಖಿಕವಾಗಿ ದೂರು ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಕಾಗವಾಡ ತಹಶೀಲ್ದಾರ್ ಎಂಎಂ ಬಳೇಗಾರ ಆಗಮಿಸಿ ಕರ್ತವ್ಯದಲ್ಲಿದ್ದ ಅಧಿಕಾರಿಗಳನ್ನು ತೀವ್ರವಾಗಿ ತರಾಟೆ ತೆಗೆದುಕೊಂಡಿದ್ದಾರೆ.
ಕಾಗವಾಡ ಶಾಸಕರ ಮನೆ ಮಹಾರಾಷ್ಟ್ರದ ಸಾಂಗ್ಲಿ ನಗರದಲ್ಲಿ ಇದೆ. ಇದರಿಂದ ಕಾಗವಾಡ ಸಾಂಗ್ಲಿಯಲ್ಲಿ ದಿನನಿತ್ಯ ಅವರು ಸಂಚಾರ ಬೆಳೆಸುವುದರಿಂದ ಅಧಿಕಾರಿಗಳು ಅವರ ಕಾರು ತಪಾಸಣೆಗೆ ಮುಂದೆ ಹೋಗಿರಲಿಲ್ಲ. ಇದರಿಂದ ಕೆಲವು ಸ್ಥಳೀಯರು ಅಸಮಾಧಾನಗೊಂಡಿದ್ದಾರೆ. ಕಾನೂನು ಎಲ್ಲರಿಗೂ ಸಮನಾಗಿದೆ. ಇಲ್ಲಿ ರಾಜಕೀಯ ಮಕ್ಕಳಿಗೆ ಬೇರೆ ಕಾನೂನು ಇಲ್ಲ ಎಂದು ಹಿರಿಯ ಅಧಿಕಾರಿಗಳನ್ನು ಕೆಲವು ಸ್ಥಳೀಯರು ತರಾಟೆ ತೆಗೆದುಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಕಾಗವಾಡ ತಹಶೀಲ್ದಾರ್ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಚೆಕ್ ಪೋಸ್ಟ್ನಲ್ಲಿ ಕರ್ತವ್ಯದಲ್ಲಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಯಾಕೆ ಶಾಸಕರ ಮಗನ ವಾಹನವನ್ನು ತಪಾಸಣೆ ಮಾಡಿಲ್ಲ? ನಿಮಗೆ ನೋಟಿಸ್ ನೀಡಲಾಗುವುದು. ಪ್ರತಿಯೊಂದು ವಾಹನ ತಪಾಸಣೆ ಮಾಡುವಂತೆ ನಿಮಗೆ ಈಗಾಗಲೇ ಹೇಳಿದ್ದೇವೆ. ಆದರೂ ನೀವು ಕರ್ತವ್ಯ ಲೋಪ ಮಾಡಿದ್ದೀರಿ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ಎಚ್ಚರಿಕೆ ನೀಡಿದ್ದಾರೆ.