ಹೈದ್ರಾಬಾದ್ : ಮನೆಗೆ ಯಜಮಾನ ಎಷ್ಟು ಮುಖ್ಯವೋ, ಪ್ರತಿ ಕ್ರೀಡಾ ತಂಡವೊಂದಕ್ಕೆ ಅಂತಹಾ ನಾಯಕ ಅತ್ಯಗತ್ಯ. 41 ವರ್ಷದ ಧೋನಿಯಲ್ಲಿ ಕೃಷ್ಣನ ತಂತ್ರಗಾರಿಕೆ, ಭೀಮನ ಶಕ್ತಿ, ಅರ್ಜುನನ ತೀಕ್ಷ್ಣತೆ, ಯುಧಿಷ್ಠಿರನ ಯಜಮಾನಿಕೆ, ನಕುಲನ ಕತ್ತಿವರಸೆಯ ಸೊಗಸು, ಸಹದೇವನಂತೆ,ವಿರೋಧಿಗಳಿಗೂ ಯುದ್ಧ ಮಾಡುವ ಸರಿಯಾದ ಸಮಯವನ್ನು ನಿಗದಿ ಮಾಡಿಕೊಡುವ ಉದಾರಿಯಾಗಿ, ಜ್ಞಾನಿಯಾಗಿ ಧೋನಿ ನಮಗೆ ಕಾಣುತ್ತಾನೆ.
ತನ್ನ ಇಷ್ಟು ಉದ್ದದ ಕ್ರಿಕೆಟ್ ಬದುಕಿನಲ್ಲಿ ಧೋನಿ ಬರೊಬ್ಬರಿ 250 IPL ಮ್ಯಾಚ್ ಆಡಿದ್ದಾನೆ. ಐದು ಬಾರಿ ತಂಡಕ್ಕೆ ಟ್ರೋಪಿ ಕೊಡಿಸಿದ್ದಾನೆ. ಬಹುಶಃ ತನ್ನ ಸುದೀರ್ಘ ಗೆಲುವಿನ ಪಯಣದಲ್ಲಿ ಧೋನಿ ಗೆದ್ದಾಗ ಕುಣಿದಿದ್ದು ಮೂರು ಬಾರಿ. ಮೊದಲ ಬಾರಿ 2007 ರಲ್ಲಿ ಟಿ -20 ವಿಶ್ವಕಪ್ ಗೆ ಉದ್ದಕೂದಲಿನ ನವ ಯುವಕ ತಂಡಕ್ಕೆ ಸಾರಥಿಯಾಗಿ ವಿಶ್ವಕಪ್ ಗೆದ್ದಾಗ ತನ್ನ ಬಿಸಿ ರಕ್ತದೊಡ್ಡವನ್ನು ಶರ್ಟ್ ಬಿಚ್ಚಿ ಪ್ರದರ್ಶನ ಮಾಡಿದ್ದ.
ಅದಾದ ಮೇಲೆ ಚೆನೈ ತಂಡದ ಮೇಲೆ ಫಿಕ್ಸಿಂಗ್ ಭೂತ ವಕ್ಕರಿಸಿಕೊಂಡು ಧೋನಿಯನ್ನೂ ಖಳನಾಯಕನಂತೆ ಕೆಲವರು ನೋಡುತ್ತಿದ್ದ ಸಮಯದಲ್ಲಿ ಅದೇ ವರ್ಷ ಅದೇ ಸಪ್ಪೆ ಮುಖ ಹಾಕಿಕೊಂಡು ಇಂಗ್ಲೆಂಡ್’ಗೆ ತೆರಳಿ ಅವರದ್ದೆ ನೆಲದಲ್ಲಿ ಚಾಂಪಿಯನ್ ಟ್ರೋಪಿ ಗೆದ್ದಾಗ ಧೋನಿ ವಿಕೆಟ್ ಹಿಂದೆ ನಿಂತು, ನಿಂತಲ್ಲೆ ಕೈ ಮೇಲೆತ್ತಿ ಎರಡು ಬಾರಿ ನೆಲದಿಂದ ಜಿಗಿದಿದ್ದ. ಅಂಕಲ್’ಗಳ ತಂಡ ಎಂದು ಮೂದಲಿಕೆಗೆ ಒಳಗಾಗಿದ್ದ ಸಮಯದಲ್ಲಿ ತಣ್ಣನೆಯ ಧೋನಿ, ಇಂದು ಮುಂಜಾನೆ 2023ರ IPL ಕಪ್ ಗೆದ್ದ ಸಮಯದಲ್ಲಿ ಡಗ್ ಔಟ್ ನಲ್ಲಿ ತಲೆ ಕೆಳಗೆ ಮಾಡಿ ಕಣ್ಣು ಮುಚ್ಚಿ ಕುಳಿತು ಧ್ಯಾನಸ್ಥನಾಗಿದ್ದ. ಕೊನೆಯ ಎಸೆತದಲ್ಲಿ ಸರ್ ರವೀಂದ್ರ ಜಡೇಜಾ ಬೌಂಡರಿ ಬಾರಿಸುತ್ತಿದ್ದಂತೆ ಧೋನಿ ಬಳಿ ಓಡಿಬಂದಾಗ ಜಡೇಜಾನನ್ನು ತನ್ನ ಭೀಮಬಲದ ತೋಳುಗಳಿಂದ ಮಕ್ಕಳನ್ನು ಎತ್ತಿ ಸೊಂಟದ ಮೇಲೆ ಕೂರಿಸಿಕೊಂಡ ಧೋನಿ ಅಕ್ಷರಶಃ ಸಂಭ್ರಮಿಸಿದ.
2011ರಲ್ಲಿ ವರ್ಡ್ ಕಪ್ ಗೆದ್ದಾಗಲೂ ಸಿಕ್ಸ್ ಹೊಡೆದು ಮ್ಯಾಚ್ ವಿನ್ ಮಾಡಿದಾಗಲೂ ಶಾಂತವಾಗಿಯೆ ಇದ್ದ ಈ ಮ್ಯಾಜಿಕ್ ಮ್ಯಾನ್ ಈ ಗೆಲುವು ನನಗೆ ಗೊತ್ತಿತ್ತು ಇದರಲ್ಲಿ ಆಶ್ಚರ್ಯ ಇಲ್ಲ ಎನ್ನುವಂತೆ ನಡೆದುಕೊಂಡಿದ್ದ. (2011ರ ವಿಶ್ವಕಪ್ ಫೈನಲ್ ಮ್ಯಾಚ್ ಗೆ ನಮ್ಮ ಎದುರಾಳಿ ಯಾರು ಎಂದು 2010 ರಲ್ಲೇ ಸೆಹವಾಗ್, ಸಚಿನ್ ಧೋನಿ ಇವರೆಲ್ಲಾ ಕುಳಿತು ಚರ್ಚೆ ಮಾಡಿದ್ರಂತೆ.)
ಇಂತಹ ಧೋನಿ ಈ ಬಾರಿ IPL ನಲ್ಲಿ ಆಡಿದ್ದು 16 ಮ್ಯಾಚ್. 182.46 ರನ್ ರೇಟ್ ನಲ್ಲಿ ಗಳಿಸಿದ ರನ್ 104. ಅದರಲ್ಲಿ 3 ಬೌಂಡರಿ, 10 ಸಿಕ್ಸರ್. 10 ಕ್ಯಾಚ್ 3 ಸ್ಟಂಪಿಂಗ್.! ಧೋನಿಗೆ ವಯಸ್ಸು ಆದರೂ ಧೋನಿಯ ಬ್ಯಾಟ್’ನ ವೇಗ ಕಡಿಮೆ ಆಗಲಿಲ್ಲ. ಧೋನಿಗೆ ವಯಸ್ಸು 41 ಎಂದು ಬರ್ತ್ ಸರ್ಟಿಫಿಕೇಟ್ ಹೇಳಿದರೂ ಧೋನಿಯ ಕೀಪಿಂಗ್ ಗ್ಲೌಸ್ ಇನ್ನೂ 0.21 ಸೆಕೆಂಡ್ ನಲ್ಲಿ ವಿಕೆಟ್ ಪಡೆಯುತ್ತಿದೆ. ಕಾಲುಗಳಿಗೆ ರಾಂಚಿ ಬಾಯ್ ಐಸ್ ಪ್ಯಾಕ್ ಕಟ್ಟಿಕೊಂಡು ಓಡಿದರೂ, ರನ್ ವೇಗ ಚಿರತೆಯನ್ನು ನೆನಪಿಸುತ್ತದೆ. ಇತರ ಆಟಗಾರರು ಕ್ಯಾಚ್ ಬಿಟ್ಟಾಗ ಸಮಾಧಾನ ಹೇಳುತ್ತದೆ ಧೋನಿಯ ಕೂಲ್ ನೆಸ್. ಯರ್ರಾಬಿರ್ರಿ ವೈಡ್ ಹಾಕಿ ಸಮಯ ಮತ್ತು ರನ್ ವ್ಯಯ ಮಾಡಿದಾಗ ನೀವು ಹೀಗೆ ಬೌಲಿಂಗ್ ಮಾಡಿದರೆ ಬೇರೆ ನಾಯಕನ ಕೆಳಗೆ ಆಡಬೇಕಾಗುತ್ತದೆ. (ಕಾರಣ ನಿಗದಿತ ಸಮಯಕ್ಕೆ ಮ್ಯಾಚ್ ಮುಗಿಯದಿದ್ದರೆ ತಂಡದ ನಾಯಕನಿಗೆ ಮ್ಯಾಚ್ ಬ್ಯಾನ್ ಮಾಡುವ ಶಿಕ್ಷೆ ಇದೆ.) ಎಂದು ಎಚ್ಚರಿಸುವ ತೀಕ್ಷ್ಣ ಮಾತುಗಾರಿಕೆ ಕರಗತವಾಗಿದೆ.
ಧೋನಿಯನ್ನೇ ನೋಡಲೆಂದೇ ಅಭಿಮಾನಿಗಳು ಸ್ಟೇಡಿಯಂಗೆ ಬರುತ್ತಿದ್ದರು. ದೋನಿ ಟಾಸ್’ಗೆ ಬಂದಾಗ ಕಿವಿಗಡಚ್ಚಿಕ್ಕುವ ಕೂಗು ಸಂಭ್ರಮ. ಆ ಕೂಗು ಎಷ್ಟಿತ್ತು ಎಂದರೆ ದೋನಿ ಆಡಿದ ಪ್ರತಿ 16 ಮ್ಯಾಚಗಳಲ್ಲಿ ಪ್ರತಿ ಮ್ಯಾಚ್ ಗೂ ಧೋನಿ ಟಾಸ್ ಮತ್ತು ಬ್ಯಾಟಿಂಗ್ ಇಳಿದಾಗ #115_ರಿಂದ120ಡೆಸಿಬಲ್.! ಅಂದರೆ ಒಂದಿಷ್ಟು ರಾಶಿ ಪಟಾಕಿ ಏಕಕಾಲಕ್ಕೆ ಹೊಡೆದಾಗ ಸ್ಥಳದಲ್ಲಿ ಆಗುವ ಸೌಂಡ್ ಎಷ್ಟಿರುತ್ತದೊ ಆ ಸೌಂಡ್’ಗೆ ಸಮ.
ಇದರ ಮಧ್ಯೆ ಅಲ್ಲೆ ಎದುರು ಬದರು ನಿಂತ ಧೋನಿಗೆ ವೀಕ್ಷವಿವರಣೆಕಾರ ಟಾಸ್ ಆದ ಮೇಲೆ ನಿಮ್ಮ ಆಯ್ಕೆ ಯಾವುದು ಎಂದು ಕೇಳಿದರೆ, ಧೋನಿ ಹೇಳಿದ್ದೆ ಕೇಳಿಸುತ್ತಾ ಇರಲಿಲ್ಲ.! ಹೀಗಾಗಿ ಒಮ್ಮೆ ವೀಕ್ಷಕ ವಿವರಣೆ ಮಾಡುವ ಡ್ಯಾನಿ ಮಾರಿಸನ್ ಕೇವಲ ಸನ್ನೆಯಲ್ಲಿ ನಿಮ್ಮ ಆಯ್ಕೆ ಯಾವುದು ಎಂದು ಕೇಳಿದ್ದ.
ಅಲ್ಲಿಗೆ ದೋನಿ ದೋನಿ ಎಂದು ಜಪಸಿಸುವ ದನಿಗಳಿಗೆ ಧೋನಿಯನ್ನೇ ನೋಡಿದಾಗ ಮೈಯಲ್ಲಿ ಹರಿದ ಕರೆಂಟ್ ಪವರ್ ಶಬ್ದದ ರೂಪದಲ್ಲಿ ಇಡಿ ಸ್ಟೇಡಿಯಂ ಮೊಳಗುತ್ತಿತ್ತು. ಕೊನೆ ಎರಡು ಒವರ್ ಇದ್ದಾಗ ಚೆನ್ನಾಗಿಯೆ, ಟೀಮ್ ಚೆನೈ ಆಟಗಾರ ಬ್ಯಾಟ್ ಬೀಸುತ್ತಿದ್ದರೂ, ಆತ ಔಟ್ ಆಗಲಿ ಎಂದು ಪ್ರಾರ್ಥನೆ ಮಾಡುತ್ತಿದ್ದ ದೃಶ್ಯ ಕಣ್ಣಿಗೆ ಬೀಳುತ್ತಿತ್ತು.! ಕಾರಣ ಕ್ರೀಸ್ ನಲ್ಲಿ ಇದ್ದ ಆಟಗಾರ ಔಟ್ ಆದರೆ ನೆಕ್ಸ್ಟ್ ದೋನಿ ಎಂಟ್ರಿ ಕೊಡುತ್ತಾನಲ್ಲ ಎನ್ನುವ ಕಾರಣಕ್ಕೆ!! ಅದೆಂತಾ ಕ್ರೇಜ್ ಹುಟ್ಟಿಸಿರಬೇಡ ದೋನಿ ಮಹಾಶಯ. ಒಬ್ಬ ಆಟಗಾರ ಔಟ್ ಆಗಿ ಡಗ್ ಔಟ್ ಸೇರುವವರೆಗೂ ಧೋನಿ ಕ್ರೀಸ್ ಗೆ ಎಂಟ್ರಿ ಕೊಡುವ ಹಾಗಿಲ್ಲ, ಕಾರಣ ಧೋನಿಗೆ ಸ್ವಾಗತ ಮಾಡುವ ಬರದಲ್ಲಿ ಔಟ್ ಆದ ಆಟಗಾರನಿಗೆ ದೋನಿ ಅಭಿಮಾನಿಗಳ ಕೂಗು ಅವಮಾನ ಮಾಡಿದಂತಾಗುತ್ತದೆ ಎಂದು, ಔಟ್ ಆದ ಪ್ಲೇಯರ್ ಡಗ್ ಔಟ್ ಸೇರುವ ತನಕ, ಧೋನಿಯೆ ಮೈದಾನ ಪ್ರವೇಶ ಮಾಡುತ್ತಾ ಇರಲಿಲ್ಲ.!! ಇದು ಧೋನಿಯ ಸಭ್ಯತೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡದ ಪರ ಯುವ ಆಟಗಾರ ಸಾಯಿ ಸುದರ್ಶನ್ ಅಮೋಘ ಆಟ ಪ್ರದರ್ಶಿಸಿದರು. ಇವರ ಬಿರುಸಾದ ಬ್ಯಾಟಿಂಗ್ನಿಂದಾಗಿ 200 ರನ್ ಗಡಿ ದಾಟಿತು. 96 ರನ್ ಮಾಡಿದ ಸುದರ್ಶನ್ ಫೈನಲ್ ಪಂದ್ಯದ ಹೀರೋ ಆದರು. ಇದರ ಜೊತೆಗೆ ವೃದ್ಧಿಮಾನ್ ಸಾಹ 54, ಶುಭಮನ್ ಗಿಲ್ 39, ಹಾರ್ದಿಕ್ ಪಾಂಡ್ಯ 21 ರನ್ಗಳ ಕಾಣಿಕೆ ನೀಡಿದರು. ಜಿಟಿ 20 ಓವರ್ಗಳಲ್ಲಿ 4 ವಿಕೆಟ್ಗೆ 214 ರನ್ ಗಳಿಸಿತು.
ಟಾರ್ಗೆಟ್ ಬೆನ್ನಟ್ಟಲು ಬಂದ ಚೆನ್ನೈಗೆ ಮಳೆ ಅಡ್ಡಿ ಪಡಿಸಿತು. 2 ಗಂಟೆಗಳ ಕಾಲ ಆಟ ನಿಂತ ಕಾರಣ ಡಕ್ವರ್ಥ್ ಲೂಯಿಸ್ ನಿಯಮದನ್ವಯ ಚೆನ್ನೈಗೆ 15 ಓವರ್ಗಳಲ್ಲಿ 171 ರನ್ ಗುರಿ ನೀಡಲಾಯಿತು. ಅದರಂತೆ ಕ್ರೀಸ್ಗೆ ಬಂದ ಗಾಯಕ್ವಾಡ್ ಹಾಗೂ ಕಾನ್ವೆ ಸ್ಫೋಟಕ ಬೌಂಡರಿ, ಸಿಕ್ಸರ್ಗಳಿಂದಲೇ ರನ್ ಗಳಿಸಿದರು. ಮೊದಲ ವಿಕೆಟ್ಗೆ ಬಿರುಸಿನ 71 ರನ್ ಮಾಡಿದರು. ಗಾಯಕ್ವಾಡ್ 16 ಎಸೆತಗಳಲ್ಲಿ 26 ರನ್ ಮಾಡಿದರೆ, ಕಾನ್ವೆ 25 ಎಸೆತಗಳಲ್ಲಿ 47 ರನ್ ಚಚ್ಚಿದರು. ಇದಾದ ಬಳಿಕ ಶಿವಂ ದುಬೆ 32, ಅಜಿಂಕ್ಯಾ ರಹಾನೆ 27, ಅಂಬಟಿ ರಾಯುಡು 19 ಹಾಗೂ ರವೀಂದ್ರ ಜಡೇಜಾ 15 ರನ್ ಮಾಡಿ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು.