ಚೆನ್ನೈ: ಒಡಿಶಾದಲ್ಲಿ ನಡೆದ ಅಪಘಾತದಂತೆ ಮತ್ತೊಂದು ರೈಲು ಅಪಘಾತ ತಮಿಳುನಾಡಿನಲ್ಲಿ ನಡೆದಿದೆ. ಮೈಸೂರಿನಿಂದ ಬಿಹಾರದ ದರ್ಬಾಂಗ್ಗೆ ಹೊರಟಿದ್ದ ಬಾಗಮತಿ ಎಕ್ಸ್ಪ್ರೆಸ್ ರೈಲು ಪ್ ಲೈನಿಗೆ ಪ್ರವೇಶ ಪಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ.
ಅಪಘಾತ ಹೇಗಾಯ್ತು?
ಮೈಸೂರಿನಿಂದ ದರ್ಬಾಂಗ್ಗೆ ತೆರಳುತ್ತಿದ್ದ ಬಾಗಮತಿ ಎಕ್ಸ್ಪ್ರೆಸ್ ರಾತ್ರಿ ಪೊನ್ನೇರಿ ರೈಲು ನಿಲ್ದಾಣ ದಾಟಿತ್ತು. ಈ ವೇಳೆ ಮುಂದಿನ ನಿಲ್ದಾಣ ಕವರಪೆಟ್ಟೈಗೆ ತೆರಳಲು ಗ್ರೀನ್ ಸಿಗ್ನಲ್ ಸಿಕ್ಕಿತ್ತು. ರಾತ್ರಿ 8:30ರ ವೇಳೆ ನಿಲ್ದಾಣ ಪ್ರವೇಶಿಸುವಾಗ ಗೂಡ್ಸ್ ರೈಲಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.
ಕವರೈಪೆಟ್ಟೈ ಎಲ್ಲಿದೆ?
ಚೆನ್ನೈನಿಂದ ಕವರಪೆಟ್ಟೈ 40 ಕಿ.ಮೀ ದೂರದಲ್ಲಿದೆ. ಮೈಸೂರಿನಿಂದ ಬೆಳಗ್ಗೆ 10:34ಕ್ಕೆ ಹೊರಟ್ಟಿದ್ದ ರೈಲು ಮಧ್ಯಾಹ್ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(ಕೆಎಸ್ಆರ್) ನಿಲ್ದಾಣಕ್ಕೆ ತಲುಪಿತ್ತು. ಅ.13 ರಂದು ಈ ರೈಲು ಬಿಹಾರ ದರ್ಬಾಂಗಕ್ಕೆ ತಲುಪಬೇಕಿತ್ತು.
ಅಪಘಾತಕ್ಕೆ ಕಾರಣ ಏನು?
ಈ ರೈಲು ಕವರಪೆಟ್ಟೈ ನಿಲ್ದಾಣದ ನಂತರ ಗುಡೂರಿನ ಕಡೆಗೆ ಹೋಗಬೇಕಿತ್ತು. ಇದು ಎಕ್ಸ್ಪ್ರೆಸ್ ರೈಲಾಗಿದ್ದ ಕಾರಣ ಕವರಪೆಟ್ಟೈ ನಿಲ್ದಾಣದಲ್ಲಿ ನಿಲುಗಡೆ ಇರಲಿಲ್ಲ. ಚೆನ್ನೈನಿಂದ ಈ ರೈಲಿಗೆ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಚಾಲಕ ಸಿಗ್ನಲ್ಗಳನ್ನು ಸರಿಯಾಗಿ ಅನುಸರಿಸಿದ್ದಾನೆ. ಇಲ್ಲಿ ರೈಲು ಮೇನ್ ಲೈನ್ನಲ್ಲಿ ಸಾಗಬೇಕಿತ್ತು.ಆದರೆ ಲೂಪ್ ಲೈನ್ಗೆ ರೈಲು ಪ್ರವೇಶ ಮಾಡಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಬೋಗಿಗಳು ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಗಂಟೆಗೆ 100 ಕಿ.ಮೀ ವೇಗದಲ್ಲಿ ಎಕ್ಸ್ಪ್ರೆಸ್ ರೈಲು ಸಂಚರಿಸುತ್ತಿದ್ದ ಕಾರಣ 13 ಬೋಗಿಗಳು ಹಳಿ ತಪ್ಪಿವೆ.
ಏನಿದು ಲೂಪ್ಲೈನ್?
ಸುಗಮ ಸಂಚಾರಕ್ಕಾಗಿ ರೈಲು ನಿಲ್ದಾಣಗಳಲ್ಲಿ ನಿರ್ಮಿಸಲಾಗುವ ಹೆಚ್ಚುವರಿ ಹಳಿಗಳನ್ನು ಲೂಪ್ ಲೈನ್ ಎಂದು ಕರೆಯಲಾಗುತ್ತದೆ. ಅದು ನಿಲ್ದಾಣದ ವ್ಯಾಪ್ತಿ ಮುಗಿದ ಬಳಿಕ ಮತ್ತೆ ಮೇನ್ ಲೈನ್ಗೆ ಸೇರ್ಪಡೆಯಾಗುತ್ತದೆ. ಎಕ್ಸ್ಪ್ರೆಸ್ ರೈಲುಗಳ ಸಂಚಾರಕ್ಕೆ ಯಾವುದೇ ಸಮಸ್ಯೆ ಆಗದೇ ಇರಲು ಸಾಧಾರಣವಾಗಿ ಪ್ಯಾಸೆಂಜರ್ ರೈಲು, ಗೂಡ್ಸ್ ರೈಲುಗಳನ್ನು ನಿಲ್ದಾಣದಲ್ಲಿರುವ ಲೂಪ್ ಲೈನಿನಲ್ಲಿ ನಿಲ್ಲಿಸಲಾಗುತ್ತದೆ. ಸಾಮಾನ್ಯವಾಗಿ ಲೂಪ್ ಲೈನ್ ಉದ್ದ 750 ಮೀಟರ್ ಇರುತ್ತದೆ
ದೋಷ ಯಾರದ್ದು?
ಕತ್ತರಿಸಿದ ಹಳಿಯಲ್ಲಿ ಸಂಚಾರ, ಸಿಗ್ನಲ್ ಉಲ್ಲಂಘಿಸುವುದು, ನಿಗದಿ ಪಡಿಸಿದ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಸಂಚಾರ, ಹಳಿ ಮೇಲೆ ಇಡಲಗಿರುವ ಭಾರೀ ಗಾತ್ರದ ವಸ್ತುಗಳಿಗೆ ಡಿಕ್ಕಿ, ಎಂಜಿನ್ ಸಮಸ್ಯೆ, ಸಿಗ್ನಲಿಂಗ್ ಸಮಸ್ಯೆಯಿಂದ ರೈಲು ಅಪಘಾತಗಳು ಸಂಭವಿಸುತ್ತಿರುತ್ತದೆ. ಆದರೆ ಈ ಪ್ರಕರಣದಲ್ಲಿ ಸಿಗ್ನಲಿಂಗ್ನಲ್ಲಿ ದೋಷ ಇರುವುದು ಕಾಣುತ್ತದೆ. ಗ್ರೀನ್ ಸಿಗ್ನಲ್ ಸಿಕ್ಕಿದ ನಂತರ ಲೋಕೋಪೈಲಟ್ ರೈಲನ್ನು ಚಲಾಯಿಸಿದ್ದಾನೆ. ಈ ಪ್ರಕರಣದಲ್ಲಿ ಪೈಲಟ್ ಸರಿಯಾಗಿಯೇ ಚಾಲನೆ ಮಾಡಿದ್ದಾನೆ. ಆದರೆ ಮೇನ್ ಲೈನಿನಿಂದ ಲೂಪ್ ಲೈನಿಗೆ ಹಳಿ ಬದಲಾಯಿಸಿದ್ದೇ ಕಾರಣ ಎನ್ನುವುದು ಮೆಲ್ನೋಟಕ್ಕೆ ಕಾಣುತ್ತದೆ. ಈಗ ಇಲಾಖೆ ಈ ಅಪಘಾತದ ಕಾರಣ ಹುಡುಕಲು ತನಿಖೆಗೆ ಆದೇಶಿಸಿದೆ.
ಒಡಿಶಾದಲ್ಲಿ ಏನಾಗಿತ್ತು?
ಜೂನ್ 2, 2023 ರಂದು ಬಾಲಸೋರ್ ಜಿಲ್ಲೆಯ ಬಹನಾಗ ಬಜಾರ್ ರೈಲು ನಿಲ್ದಾಣದಲ್ಲಿ ಮೂರು ರೈಲುಗಳ ಮಧ್ಯೆ ಅಪಘಾತ ಸಂಭವಿಸಿತ್ತು. ಈ ಘಟನೆಯಲ್ಲಿ 296 ಮಂದಿ ಸಾವನ್ನಪ್ಪಿ 1,200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಬಹನಾಗ ಬಜಾರ್ ರೈಲು ನಿಲ್ದಾಣದಲ್ಲಿ 4 ಹಳಿಗಳು ಇವೆ. ಈ ಪೈಕಿ ಎರಡು ಮುಖ್ಯ ಅಥವಾ ಮೇನ್ ಹಳಿಗಳು ಆಗಿದ್ದರೆ ಇನ್ನು ಎರಡು ಲೂಪ್ ಹಳಿಗಳು. ಅದೇ ರೀತಿಯಾಗಿ ಒಂದು ಹಳಿಯಲ್ಲಿ ಗೂಡ್ಸ್ ರೈಲನ್ನು ನಿಲ್ಲಿಸಲಾಗಿತ್ತು. ಸಂಜೆಯ ವೇಳೆ ವೇಗವಾಗಿ ಮುಖ್ಯ ಹಳಿಯಲ್ಲಿ ಬರುತ್ತಿದ್ದ ಕೋರಮಂಡಲ್ ಎಕ್ಸ್ಪ್ರೆಸ್ ಎಲೆಕ್ಟ್ರಾನಿಕ್ ಸಿಗ್ನಲ್ ದೋಷದಿಂದ ಗೂಡ್ಸ್ ರೈಲು ನಿಂತಿದ್ದ ಹಳಿಯನ್ನು ಪ್ರವೇಶಿಸಿ ಗುದ್ದಿದೆ.
ಈ ರೈಲು ಡಿಕ್ಕಿ ಹೊಡೆಯುವ ಸಮಯದಲ್ಲೇ ಇನ್ನೊಂದು ಮುಖ್ಯ ಹಳಿಯಲ್ಲಿ ಬೆಂಗಳೂರಿನಿಂದ ಹೌರಾಗೆ ಹೊರಟಿದ್ದ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲು ಬಂದಿತ್ತು. ಗೂಡ್ಸ್ ರೈಲಿಗೆ ಗುದ್ದಿದ ರಭಸಕ್ಕೆ ಕೋರಮಂಡಲ್ ಎಕ್ಸ್ಪ್ರೆಸ್ ರೈಲಿನ ಬೋಗಿಗಳು ಯಶವಂತಪುರದಿಂದ ಹೊರಟಿದ್ದ ರೈಲಿನ ಕೊನೆಯ ಎರಡು ಬೋಗಿಗಳ ಮೇಲೆ ಬಿದ್ದಿತ್ತು. ಕೋರಮಂಡಲ್ ಎಕ್ಸ್ಪ್ರೆಸ್ನ ಹಳಿತಪ್ಪಿದ ಬೋಗಿಗಳು ಗಂಟೆಗೆ 126 ಕಿ.ಮೀ ವೇಗದಲ್ಲಿ ಬರುತ್ತಿದ್ದ ಯಶವಂತಪುರ ಎಕ್ಸ್ಪ್ರೆಸ್ ರೈಲಿನ ಬೋಗಿಗಳ ಮೇಲೆ ಬಿದ್ದ ಪರಿಣಾಮ ಸಾವು ನೋವು ಹೆಚ್ಚಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ಸಿಬಿಐ ಕರ್ತವ್ಯ ಲೋಪ ಇತ್ಯಾದಿ ಆರೋಪಗಳನ್ನು ಹೊರಿಸಿ ಸೀನಿಯರ್ ಸೆಕ್ಷನ್ ಎಂಜಿನಿಯರ್, ಸಿಗ್ನಲ್ ವಿಭಾಗದ ಎಂಜಿನಿಯರ್ ಮತ್ತು ಟೆಕ್ನಿಷಿಯನ್ ವಿರುದ್ಧ ಆರೋಪ ಪಟ್ಟಿಯನ್ನು ಸಲ್ಲಿಸಿತ್ತು.