ಆಟದಲ್ಲಿ ಸೋಲು ಗೆಲುವು ಇದ್ದಿದ್ದೆ. ಒಬ್ಬರು ಗೆದ್ದರೇ ಮತ್ತೊಬ್ಬರು ಸೋಲಲೇ ಬೇಕು. ಆದರೆ ರಷ್ಯಾದ ಮಹಿಳಾ ಚೆಟ್ ಆಟಗಾರ್ತಿಯೊಬ್ಬರು ತಾನೇ ಗೆಲ್ಲಬೇಕು ಎಂಬ ದುರಾಸೆಯಿಂದ ತನ್ನ ಪ್ರತಿಸ್ಪರ್ಧಿಗೆ ವಿಷಪ್ರಾಸನ ಮಾಡಿದ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆ ಆಗಿದೆ.
ಸ್ಪರ್ಧೆ ನಡೆಯುವುದಕ್ಕೆ ಮೊದಲೇ ಸ್ಪರ್ಧೆ ಆಯೋಜಿಸಿದ ಕೊಠಡಿಗೆ ಬಂದ ಆರೋಪಿ ಸ್ಪರ್ಧೆಗೆ ಸೆಟ್ ಮಾಡಿ ಇರಿಸಿದ್ದ ಚೆಸ್ಬೋರ್ಡ್ಗಳಲ್ಲಿ ತನ್ನ ಪ್ರತಿಸ್ಪರ್ಧಿ ಆಡಲಿದ್ದ ಚೆಸ್ಬೋರ್ಡ್ಗೆ ಪಾದರಸ ಹಾಕಿ ಅಲ್ಲಿಂದ ಹೊರ ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ತನ್ನ ಎದುರಾಳಿಗೆ ವಿಷಪ್ರಾಶನ ಮಾಡಿರುವ ಚೆಸ್ ಆಟಗಾರ್ತಿಯನ್ನು ಅಮಿನಾ ಅಬಕರೊವಾ ಎಂದು ಗುರುತಿಸಲಾಗಿದೆ. ಇನ್ನು ಹೀಗೆ ಈಕೆ ವಿಷಪ್ರಾಸನ ಮಾಡಿದ್ದು, ಆಕೆಯ ಬಾಲ್ಯದ ವಿರೋಧಿ ಉಮಯ್ಗನತ್ ಒಸ್ಮನೊವಾ ಎಂಬಾಕೆಗೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆರೋಪಿ ಅಮಿನಾ ಅಬಕರೊವಾಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪ ಸಾಬೀತಾದಲ್ಲಿ ಅಮಿನಾ ಅಬಕರೊವಾಗೆ ಮೂರು ವರ್ಷಗೂ ಅಧಿಕ ಶಿಕ್ಷೆಯಾಗಲಿದೆ.
ರಷ್ಯನ್ ರಿಪಬ್ಲಿಕ್ ಆದ ಡಗೇಸ್ತಾನ್ನಲ್ಲಿ ಈ ಚೆಸ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಆದರೆ ಈ ಸ್ಪರ್ಧೆಯಲ್ಲಿ ಆಟಗಾರ್ತಿ ಅಮಿನಾ ಅಬಕರೊವಾ ಸ್ಪರ್ಧೆ ಆರಂಭವಾಗುವುದಕ್ಕೆ ಮೊದಲು ತನ್ನ ಪ್ರತಿಸ್ಪರ್ಧಿಗೆ ನಿಗದಿಯಾಗಿದ್ದ ಚೆಸ್ ಟೇಬಲ್ ಮೇಲೆ ಹಾಕಿದ ನಂತರ ಅಲ್ಲಿನ ಸ್ಥಿತಿ ನಾಟಕೀಯ ತಿರುವು ಪಡೆಯಿತು ಎಂದು ಸಾಮಾಜಿಕ ಜಾಲತಾಣದಲ್ಲಿ UNITED24 Media ಪೋಸ್ಟ್ ಮಾಡಿದೆ.
ಇದಾದ ನಂತರ ಉಮೈಗನತ್ ಒಸ್ಮನೊವಾ ಚೆಸ್ ಪಂದ್ಯಾವಳಿಯ ಮಧ್ಯೆಯೇ ಅಸ್ವಸ್ಥಳಾಗಿದ್ದು, ಆಕೆಗೆ ಕೂಡಲೇ ವೈದ್ಯಕೀಯ ನೆರವು ನೀಡಲಾಗಿದೆ. ಇದಾಗಿ ಸ್ವಲ್ಪ ಹೊತ್ತಿನಲ್ಲಿ ಸಿಸಿಟಿವಿಯಲ್ಲಿ ದೃಶ್ಯಾವಳಿ ಗಮನಿಸಿದ್ದು, ಆರೋಪಿ ಅಮಿನಾ ಅಬಕರೊವಾಳನ್ನು ಬಂಧಿಸಲಾಗಿದೆ. ಈ ವಿಚಾರಡಾಗೇಸ್ತಾನ್ನ ಕ್ರೀಡಾ ಸಚಿವ ಸಜ್ಹಿದ್ ಸಜ್ಹಿದೊವಾ ಅವರ ಗಮನವನ್ನು ಕೂಡ ಸೆಳೆದಿದ್ದು, ಇತರರಂತೆ ಈ ಘಟನೆಯನ್ನು ನೋಡಿ ನಾನು ಗಾಬರಿಗೊಂಡಿದ್ದೇನೆ. ಅಮೀನಾ ಅಬಕರೊವಾ ಅವರಂತಹ ಸ್ಪರ್ಧಿಗಳ ಉದ್ದೇಶವನ್ನು ಯಾರಿಗೂ ಗ್ರಹಿಸಲಾಗದು. ಈಕೆಯ ಇಂತಹ ಕೃತ್ಯಗಳು ದುರಂತಕ್ಕೆ ಆಹ್ವಾನ ನೀಡಬಲ್ಲದು . ಇದು ವಿಷಪ್ರಾಸನ ಮಾಡಿದ ಆಕೆಯೂ ಸೇರಿದಂತೆ ಅಲ್ಲಿದ್ದ ಎಲ್ಲರಿಗೂ ಅಪಾಯಕಾರಿ. ಆಕೆಯ ಕೃತ್ಯಕ್ಕೆ ಆಕೆ ನ್ಯಾಯಾಲಯದ ಮುಂದೆ ಉತ್ತರಿಸಲೇಬೇಕು ಎಂದು ಅವರು ಟ್ವಿಟ್ ಮಾಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಆರಂಭವಾಗಿದ್ದು, ಅಮಿನಾ ಅಬಕರೊವಾ ವೈಯಕ್ತಿಕ ಹಗೆತನದಿಂದ ತಾನು ಈ ಕೃತ್ಯವೆಸಗಿದ್ದಾಗಿ ಬಾಯ್ಬಿಟ್ಟಿದ್ದಾಳೆ. ಉಮೈಗನತ್ ಒಸ್ಮನೊವಾ ಈ ಮೊದಲು ಪ್ರಾದೇಶಿಕ ಸ್ಪರ್ಧೆಯಲ್ಲಿ ತನ್ನನ್ನು ಸೋಲಿಸಿದ್ದಳು, ಇದೇ ದ್ವೇಷದಿಂದ ತಾನು ಈ ಕೃತ್ಯವೆಸಗಿರುವುದಾಗಿ ಆಕೆ ಹೇಳಿದ್ದಾಳೆ.