ಚಿಕ್ಕಮಗಳೂರು, ಡಿಸೆಂಬರ್ 27: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಅದ್ಧೂರಿ ದತ್ತ ಜಯಂತಿಗೆ ಮಂಗಳವಾರ ಶಾಂತಿಯುತ ತೆರೆ ಬಿದ್ದಿದೆ. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ದತ್ತ ಮಾಲಾಧಾರಿಗಳು ಪಾದುಕೆ ದರ್ಶನ ಪಡೆದರು. ದತ್ತಮಾಲೆ ಧರಿಸಿದ್ದ ಭಕ್ತರು ಶ್ರದ್ಧಾಭಕ್ತಿಯಿಂದ ಪೂಜೆ ನೆರವೇರಿಸಿ, ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದತ್ತಾತ್ರೇಯನ ಘೋಷವಾಕ್ಯ ಮೊಳಗಿಸುತ್ತ ದತ್ತಪಾದುಕೆ ದರ್ಶನ ಪಡೆದರು. ದತ್ತ ಜಯಂತಿ ಹಿನ್ನೆಲೆ ಜಿಲ್ಲಾಡಳಿತ ಸಕಲ ವ್ಯವಸ್ಥೆಯನ್ನು ಮಾಡಿತ್ತು.
ದತ್ತಪೀಠದ ತುಳಸಿ ಕಟ್ಟೆಯ ಬಳಿ ಹಿಂದೂ ಮುಖಂಡರು ಹಾಗೂ ಬಿಜೆಪಿ ನಾಯಕ ಸಿ. ಟಿ. ರವಿ ಹೋಮ ಹವನ ನಡೆಸಿ ಪೂಜೆ ನೆರವೇರಿಸಿದರು. ಪೂಜೆಯಲ್ಲಿ ವಿವಿಧ ಮಠಗಳ ಶ್ರೀಗಳು ಭಾಗವಹಿಸಿ ದತ್ತಪೀಠ ಹಿಂದುಗಳ ಪೀಠವಾಗಬೇಕೆಂದು ಎಲ್ಲರೂ ಒಗ್ಗಟ್ಟಿನ ಮೂಲಕ ಕೊನೆವರೆಗೂ ಹೋರಾಟ ಮಾಡುವುದಾಗಿ ಸಂಕಲ್ಪ ಮಾಡಿದರು.
ದತ್ತಪೀಠದಲ್ಲಿ ಪೊಲೀಸರ ಭದ್ರಕೋಟೆಯಲ್ಲಿ ಈ ಬಾರಿಯ ದತ್ತ ಜಯಂತಿ ನಡೆಯಿತು. ಪೀಠದಲ್ಲಿ ಹೆಜ್ಜೆ ಹೆಜ್ಜೆಗೂ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ವಿವಾದಿತ ಇನಾಂ ದತ್ತಾತ್ರೇಯ ಪೀಠದ ಗೋರಿಗಳ ಸುತ್ತ ಪೊಲೀಸರನ್ನು ಹಾಕಲಾಗಿತ್ತು. ರಾಜ್ಯ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು 10 ಸಾವಿರಕ್ಕೂ ಹೆಚ್ಚು ದತ್ತ ಭಕ್ತರು ಪಾದುಕೆಯ ದರ್ಶನ ಪಡೆದು ಪುನೀತರಾದರು.