ಬೆಂಗಳೂರು: ಚಿಕ್ಕಪೇಟೆ ಕ್ಷೇತ್ರದಲ್ಲಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದ ಕೆಜಿಎಫ್ ಬಾಬು ಉರುಫ್ ಯೂಸುಫ್ ಷರೀಫ್ ತಮ್ಮ ಪತ್ನಿ ಶಾಝಿಯಾ ತರನ್ನುಮ್ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ.
ಶಾಝಿಯಾ ತರುನ್ನುಮ್ ಅವರು ಗುರುವಾರ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದು, ಈ ವೇಳೆ ಅವರು ತಮ್ಮ ಬ್ಯಾಂಕ್ ಖಾತೆಗಳಲ್ಲಿ ಠೇವಣಿ, ಷೇರು ಹೂಡಿಕೆ, ಆಭರಣ ಸೇರಿದಂತೆ 40.59 ಲಕ್ಷ ರೂ.ಗಳ ಚರಾಸ್ತಿ ಇದೆ. ಪತಿ ಕೆಜಿಎಫ್ ಬಾಬು ಉರುಫ್ ಯೂಸುಫ್ ಷರೀಫ್ ಹೆಸರಿನಲ್ಲಿ ಸುಮಾರು 83.56 ಕೋಟಿ ರೂ.ಗಳ ಚರಾಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ.
ತಮ್ಮ ಬಳಿ ಯಾವುದೇ ಸ್ಥಿರಾಸ್ತಿಯಿಲ್ಲ ಎಂದಿರುವ ಅವರು ಪತಿ ಕೆಜಿಎಫ್ ಬಾಬು ಹೆಸರಿನಲ್ಲಿ 1,538.15 ಕೋಟಿ ರೂ. ಬೆಲೆ ಬಾಳುವ ಸ್ಥಿರಾಸ್ತಿಗಳಿವೆ ಎಂದು ಹೇಳಿದ್ದಾರೆ. ಒಟ್ಟಾರೆ ತಮ್ಮ ಬಳಿ 40.59 ಲಕ್ಷ ರೂ. ಆಸ್ತಿ ಹಾಗೂ ಪತಿ ಬಳಿ ಬರೋಬ್ಬರಿ 1,621 ಕೋಟಿ ರೂ. ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ.
ಐದು ಐಷಾರಾಮಿ ಕಾರ್ ಬುಕ್ ಮಾಡಿದ್ದಾರೆ ಪತಿ!
ಕೆಜಿಎಫ್ ಬಾಬು ಅವರ ಆಸ್ತಿಯಲ್ಲಿ 16 ಬ್ಯಾಂಕ್ ಖಾತೆಗಳಲ್ಲಿರುವ ಕೋಟ್ಯಂತರ ರೂ. ಠೇವಣಿ, ಕಂಪನಿಗಳಲ್ಲಿನ ಹತ್ತಾರು ಕೋಟಿ ರೂ. ಹೂಡಿಕೆ, ಹತ್ತಾರು ವ್ಯಕ್ತಿಗಳು-ಸಂಸ್ಥೆಗಳಿಗೆ ನೀಡಿರುವ 46 ಕೋಟಿ ರೂ.ಗೂ ಮಿಗಿಲಾದ ಸಾಲ, ಕಾರು ಹಾಗೂ ಭೂಮಿ ಖರೀದಿಗೆ ನೀಡಿರುವ ಮುಂಗಡ ಹಣ ಸೇರಿದೆ.
ಶಾಝಿಯಾ ತರನ್ನುಮ್ ಬಳಿ 38.58 ಲಕ್ಷ ರೂ. ಮೌಲ್ಯದ 643 ಗ್ರಾಂ ಚಿನ್ನವಿದ್ದರೆ, ಪತಿ ಬಳಿ 91.08 ಲಕ್ಷ ರೂ. ಮೌಲ್ಯದ 1.51 ಕೆಜಿ ಚಿನ್ನವಿದೆ. ಪತಿ ಬಳಿ ರೋಲ್ಸ್ ರಾಯ್ಸ್, ಫಾರ್ಚೂನರ್ ಕಾರುಗಳಿದ್ದು, ಇನ್ನೂ ಐದು ಕಾರುಗಳ ಖರೀದಿಗೆ 2.67 ಕೋಟಿ ರೂ. ಮುಂಗಡ ಹಣ ನೀಡಿದ್ದಾರೆ. ಇವುಗಳಲ್ಲಿ ಬೆಂಜ್ (ಸ್ಕಾಟ್), ಫೋರ್ಡ್ ಎಂಡೆವರ್, ನಿಸ್ಸಾನ್, ರೋಲ್ಸ್ ರಾಯ್ಸ್, ಟೊಯೋಟಾ ವೆಲ್ಫೈರ್ ಕಾರುಗಳು ಸೇರಿವೆ.
ಕೆಜಿಎಫ್ ಬಾಬು ಬಳಿ ಇದೆ 1,538 ಕೋಟಿ ರೂ. ಸ್ಥಿರಾಸ್ತಿ!
ತಮ್ಮ ಬಳಿ ಯಾವುದೇ ಸ್ಥಿರಾಸ್ತಿಯಿಲ್ಲ ಎಂದಿರುವ ಅವರು ಪತಿ ಕೆಜಿಎಫ್ ಬಾಬು ಹೆಸರಿನಲ್ಲಿ 3 ಕೃಷಿ ಜಮೀನು, 24 ಕೃಷಿಯೇತರ ಭೂಮಿ ಇದ್ದು 1,538.15 ಕೋಟಿ ರೂ. ಬೆಲೆ ಬಾಳುವ ಸ್ಥಿರಾಸ್ತಿಗಳಿವೆ ಎಂದು ಶಾಝಿಯಾ ತರನ್ನುಮ್ ಹೇಳಿದ್ದಾರೆ.
ಪತಿಯು 65.32 ಕೋಟಿ ರೂ. ಸಾಲ ಹೊಂದಿದ್ದಾರೆ ಮತ್ತು 13.43 ಕೋಟಿ ರೂ. ಆದಾಯ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ ಎಂದು ವಿವರ ನೀಡಿದ್ದಾರೆ. ಕೆಜೆಎಫ್ ಬಾಬು ಅವರು ಕಾಂಗ್ರೆಸ್ ನಾಯಕ ಎಂ.ಆರ್. ಸೀತಾರಾಂ ಅವರಿಗೂ 22.19 ಕೋಟಿ ರೂ. ಸಾಲ ಬಾಕಿ ಉಳಿಸಿಕೊಂಡಿದ್ದಾರೆ.
ವಿಶೇಷವೆಂದರೆ ಪತ್ನಿ ಸ್ಪರ್ಧಿಸುತ್ತಿರುವ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ಅವರಿಗೂ ಕೆಜಿಎಫ್ ಬಾಬು 3.90 ಕೋಟಿ ರೂ. ಸಾಲ ಕೊಟ್ಟಿದ್ದಾರೆ ಎಂದು ಶಾಝಿಯಾ ಪ್ರಮಾಣ ಪತ್ರದಲ್ಲಿ ಉಲ್ಲೇಖವಾಗಿದೆ. ಪತಿ 2022-23ರಲ್ಲಿ 46.19 ಕೋಟಿ ರೂ. ಆದಾಯ ಗಳಿಸಿದ್ದಾರೆ ಎಂದೂ ಶಾಝಿಯಾ ತರನ್ನುಮ್ ಅಫಿಡವಿಟ್ನಲ್ಲಿ ತಿಳಿಸಿದ್ದಾರೆ.