ಬೆಂಗಳೂರು: ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ ಪ್ರಕರಣದಲ್ಲಿ ರೀಲ್ಸ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಅವರ ಪೊಲೀಸ್ ಕಸ್ಟಡಿ ಇಂದಿಗೆ ಅಂತ್ಯವಾಗಲಿದೆ. ರಾಯಚೂರು ಮೂಲದ ಮಗುವನ್ನು ಕಾನೂನು ಬಾಹಿರವಾಗಿ ದತ್ತು ಪಡೆದ ಪ್ರಕರಣದಲ್ಲಿ ಸೋನು ಬಂಧನಾಗಿದ್ದು, ಮಗುವನ್ನು ಸಹ ರೀಲ್ಸ್ನಲ್ಲಿ ಬಳಸಿಕೊಂಡಿದ್ದರು. ಅದರಲ್ಲಿ ಬಂದ ಹಣವನ್ನು ಅವರ ಪೋಷಕರಿಗೆ ಕೊಡುವ ಹೇಳಿಕೆ ನೀಡಿದ್ದರು.
ಇದು ಕೂಡ ಕಾನೂನು ಬಾಹಿರ, ಜೊತೆಗೆ ದತ್ತು ಪಡೆಯೋ ಸಂಬಂಧ ಯಾವುದೇ ಕಾನೂನು ಪಾಲನೆ ಮಾಡಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು. ಒಂದು ವೇಳೆ ದತ್ತು ಪಡೆದರೂ ಆ ಮಗುವಿಗೆ ಸಂಬಂಧಿಸಿದ ಯಾವುದೇ ಗುರುತಿನ ದಾಖಲೆಗಳು ಮತ್ತು ಪೋಷಕರ ಗುರುತು ಬಿಟ್ಟುಕೊಡುವುದು ಕಾನೂನು ಬಾಹಿರ. ಸದ್ಯ 4 ದಿನ ಕಸ್ಟಡಿಗೆ ಪಡೆದ ಬ್ಯಾಡರಹಳ್ಳಿ ಪೊಲೀಸರು,
ನಿನ್ನೆಯಷ್ಟೇ (ಭಾನುವಾರ) ರಾಯಚೂರಿಗೆ ಸೋನು ಶ್ರೀನಿವಾಸ್ ಗೌಡರನ್ನ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿ, ಸ್ಥಳೀಯರ ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದರು. ಇಂದಿಗೆ (ಸೋಮವಾರ) ಸೋನು ಶ್ರೀನಿವಾಸ್ ಗೌಡರ ಪೊಲೀಸ್ ಕಸ್ಟಡಿ ಅಂತ್ಯ ವಾಗಲಿದ್ದು ಕೋರ್ಟ್ ಮುಂದೆ ಬ್ಯಾಡರಹಳ್ಳಿ ಪೊಲೀಸ್ ಹಾಜರು ಪಡಿಸಲಿದ್ದಾರೆ.
ಯಾವೆಲ್ಲ ನಿಯಮ ಉಲ್ಲಂಘನೆ?
ನಿಯಮಗಳ ಪ್ರಕಾರ ಮಗುವನ್ನು ದತ್ತು ಪಡೆಯುವಾಗ ಅರ್ಜಿ ಸಲ್ಲಿಸಬೇಕು. ಆದರೆ ಸೋನುಗೌಡ ಅರ್ಜಿ ಸಲ್ಲಿಸಿರಲಿಲ್ಲ. ಮಗುವನ್ನು ಹೊರಗಡೆ ತೋರಿಸುವಂತಿಲ್ಲ ಮತ್ತು ಕುಟುಂಬದವರ ಮಾಹಿತಿಯನ್ನು ಬಹಿರಂಗಪಡಿಸುವಂತಿಲ್ಲ. ಆದರೆ ಲೈವ್ ಮಾಡುವ ಮೂಲಕ ಈ ವಿಚಾರವನ್ನು ಬಹಿರಂಗಪಡಿಸಲಾಗಿದೆ. ಮಗುವನ್ನು ಸಾಕಿ ಸಲಹುವಷ್ಟು ಪೋಷಕರಲ್ಲಿ ಆರ್ಥಿಕ ಸಾಮರ್ಥ್ಯ ಇದ್ಯಾ ಎಂಬುದನ್ನು ಪರಿಗಣಿಸಲಾಗುತ್ತದೆ. ಮುಖ್ಯವಾಗಿ ಸೋನು ಶ್ರೀನಿವಾಸ್ ಗೌಡ ಮದುವೆ ಸಹ ಆಗಿಲ್ಲ. ದತ್ತು ಪಡೆಯುವವರು ಹಾಗು ಮಗುವಿನ ವಯಸ್ಸಿನ ಅಂತರ 25 ವರ್ಷ ಇರಬೇಕಾಗುತ್ತದೆ.
ವಿಡಿಯೋದಲ್ಲಿ ಮಗುವಿನ ಕುಟುಂಬದಿಂದ ಅನುಮತಿ ಪಡೆದಿದ್ದೇನೆ ಎಂದು ಹೇಳಿದ್ದಾರೆ. ಹೀಗಾಗಿ ಮಗುವನ್ನು ಮಾರಾಟ ಮಾಡಿದ್ದಾರಾ ಎಂಬ ಪ್ರಶ್ನೆಯೂ ಇಲ್ಲಿ ಎದ್ದಿದೆ. ಮಗುವನ್ನು ಮಾರಾಟ ಮಾಡಲು ನಿಷೇಧ ಇರುವ ಕಾರಣ ಪೋಷಕರನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ. ಹಿಂದೂ ದತ್ತು ಮತ್ತು ನಿರ್ವಹಣೆ ಕಾಯಿದೆ 1956ರ ಪ್ರಕಾರ ದತ್ತು ಪಡೆಯುವ ಪ್ರಕ್ರಿಯೆ ಕುರಿತ ಸಂಪೂರ್ಣ ಮಾಹಿತಿಯನ್ನು ನೀಡಬೇಕಾಗುತ್ತದೆ. ಇದಕ್ಕೋಸರ ಮಕ್ಕಳ ರಕ್ಷಣಾ ಘಟಕ, ರಾಜ್ಯ ದತ್ತು ಪ್ರಾಧಿಕಾರ,
ಆಕೆ ನೆಲೆಸಿರುವ ಅರ್ಜಿ ವಿಳಾಸ ಎಲ್ಲಾ ಮಾಹಿತಿಗಳನ್ನು ಪಡೆದು ಎಲ್ಲಾ ನಿಯಮಗಳನ್ನು ಪಾಲಿಸಿದ ಬಳಿಕ ಮಕ್ಕಳ ಕಲ್ಯಾಣ ಸಮಿತಿಯ ಸಮ್ಮುಖದಲ್ಲಿ ಮಕ್ಕಳನ್ನು ದತ್ತು ಪಡೆಯಬೇಕು. ಬಾಲ ನ್ಯಾಯ ಕಾಯಿದೆ 2000 ಕಲಂ 29ರ ಪ್ರಕಾರ ಪೋಷಕರು ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ ಸಮಿತಿ ಆದೇಶದ ಪ್ರಕಾರವೇ ದತ್ತು ನೀಡಬೇಕು ಸದ್ಯ ಸೋನು ಶ್ರೀನಿವಾಸ್ ಗೌಡ ವಿರುದ್ಧ ಕಠಿಣ ಸೆಕ್ಷನ್ಗಳ ಆಧಾರದ ಮೇಲೆ ಪ್ರಕರಣ ದಾಖಲಿಸಿರುವುದರಿಂದ ಬಹುತೇಕ ಜೈಲುಪಾಲಾಗುವುದು ಖಚಿತ ಎಂದು ಪೊಲೀಸ್ ಮೂಲಗಳು ತಿಳಿಸಿವೆ.