ಬೆಂಗಳೂರು: ಶಾಲಾ ಆರಂಭೋತ್ಸವದ ವೇಳೆಗೆ ವಿದ್ಯಾರ್ಥಿಗಳಿಗೆ ಮೊದಲ ಜೊತೆ ಸಮವಸ್ತ್ರ ದೊರೆಯಲಿದ್ದು, ಎರಡನೇ ಜೊತೆ ಆಗಸ್ಟ್ ವೇಳೆಗೆ ವಿದ್ಯಾರ್ಥಿಗಳ ಕೈಸೇರಲಿದೆ.
ನೀತಿ ಸಂಹಿತೆ ಜಾರಿಯಲ್ಲಿದ್ದರೂ 2ನೇ ಜೊತೆ ಸಮವಸ್ತ್ರ ನೀಡಲು ಚುನಾವಣಾ ಆಯೋಗ ಅನುಮತಿ ನೀಡಿರುವುದರಿಂದ ಸದ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯು ಟೆಂಡರ್ ಕರೆದಿದೆ. ಟೆಂಡರ್ ತಾಂತ್ರಿಕ ಮತ್ತು ಆರ್ಥಿಕ ಬಿಡ್ ತೆರೆದು ಆಯ್ಕೆಯಾಗುವ ಕಂಪನಿಗೆ ಕಾರ್ಯಾದೇಶ ನೀಡಿ, ಪೂರೈಕೆ ಅವಕಾಶ ಕಲ್ಪಿಸಿ ವಿದ್ಯಾರ್ಥಿಗಳ ಕೈಗೆ ತಲುಪಿಸುವ ವೇಳೆಗೆ ಅಂದಾಜು ಆಗಸ್ಟ್ ವರೆಗೆ ಸಮಯ ಬೇಕಿದೆ. ಆನಂತರ ವಿದ್ಯಾರ್ಥಿಗಳಿಗೆ ಎರಡನೇ ಜೊತೆ ಸಮವಸ್ತ್ರ ಸಿಗಲಿದೆ. ಮಳೆಗಾಲದ ಅವಧಿಯಲ್ಲಿ ಮಕ್ಕಳಿಗೆ ಸಮಸ್ಯೆಯಾಗುತ್ತದೆ ಎನ್ನುವ ಕಾರಣಕ್ಕೆ ಎರಡನೇ ಜೊತೆ ಸಮವಸ್ತ್ರ ನೀಡಲಾಗುತ್ತದೆ. ಆದರೆ ಈ ಸಲ ಮುಂಗಾರು ಬಹುತೇಕ ಮುಕ್ತಾಯದ ಹಂತ ತಲುಪಿದ ಬಳಿಕ ಸಿಗಲಿದೆ.
ಇದಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯು 74 ಕೋಟಿ ರೂ.ವೆಚ್ಚ ಮಾಡುತ್ತಿದೆ. 1ರಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ 44.49 ಲಕ್ಷ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ. ಎರಡನೇ ಜೊತೆ ಸಮವಸ್ತ್ರವನ್ನು 2021-22ನೇ ಸಾಲಿನಲ್ಲಿ ನೀಡಿರಲಿಲ್ಲ. ಆ ವೇಳೆ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗಿದ್ದರಿಂದ ಅನುದಾನದ ಕೊರತೆಯಿಂದಾಗಿ ಸಮವಸ್ತ್ರ ನೀಡಿರಲಿಲ್ಲ.
ಕೊರೊನಾ ಸಮಯದಲ್ಲಿ ಕೇಂದ್ರ ಸರಕಾರ ಹಣದ ಕೊರತೆಯಿಂದಾಗಿ ಸಮವಸ್ತ್ರಕ್ಕೆ ಅನುದಾನ ನೀಡಲಿಲ್ಲ. ಹೀಗಾಗಿ, ಸಂಪೂರ್ಣ ಹಣವನ್ನು ರಾಜ್ಯ ಸರಕಾರವೇ ಭರಿಸಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಸಮವಸ್ತ್ರ ನೀಡಲು ಸರಕಾರ ಹಿಂದೇಟು ಹಾಕಿತ್ತು. ಆ ವೇಳೆಯಲ್ಲಿ ಕೊರೊನಾ ಲಾಕ್ಡೌನ್ನಿಂದ ಬಹುತೇಕ ತಿಂಗಳು ಶಾಲೆಗಳು ಬಾಗಿಲು ತೆರೆದಿರಲಿಲ್ಲ. ಇದೀಗ 2022-23ರ ಅನುದಾನದಲ್ಲಿ 2023-24ರ ಶೈಕ್ಷಣಿಕ ಅವಧಿಗೆ ಎರಡನೇ ಜೊತೆ ಸಮವಸ್ತ್ರ ನೀಡಲಾಗುತ್ತಿದೆ.